ಕ್ಯಾನ್ಸರ್‌ನಿಂದ ಪತ್ನಿ ಸಾವು: ತನ್ನನ್ನು ತಾನೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಐಪಿಎಸ್ ಅಧಿಕಾರಿ
Thursday, June 20, 2024
ದಿಸ್ಪುರ್: ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಮೃತಪಟ್ಟ ಕೆಲವೇ ಕ್ಷಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿಯೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಅಸ್ಸಾಂನ ಗುವಾಹಟಿ ನಗರದಲ್ಲಿರುವ ನೆಮ್‌ಕೇರ್ ಎನ್ನುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹಾಗೂ 2009ರ ಬ್ಯಾಚ್‌ನ ಡಿಐಜಿ ಶ್ರೇಣಿಯ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ (44) ಆತ್ಮಹತ್ಯೆ ಮಾಡಿಕೊಂಡವರು.
ಇವರ ಪತ್ನಿ ಆಗಮೊನೀ ಬಾರ್ಬರುವಾ ಕಳೆದ 2 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದ್ದರಿಂದ ಇವರನ್ನು ನೆಮ್‌ಕೇರ್ ಖಾಸಗಿ ಆಸ್ಪತ್ರೆಗೆ ಎರಡು ತಿಂಗಳು ಹಿಂದೆ ದಾಖಲಿಸಲಾಗಿತ್ತು. ಪತ್ನಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ 4 ತಿಂಗಳಿನಿಂದ ಶಿಲಾದಿತ್ಯ ಚೇಟಿಯಾ ರಜೆಯಲ್ಲಿದ್ದರು. ಇವರು ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ 2 ತಿಂಗಳುಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ಇದಕ್ಕಾಗಿ ಅನುಮತಿ ಪಡೆದುಕೊಂಡು ಪ್ರತ್ಯೇಕ ರೂಮ್ ತೆಗೆದುಕೊಂಡಿದ್ದರು. ಕಳೆದ 3 ದಿನಗಳಿಂದ ಅವರ ಪತ್ನಿಯ ಸ್ಥಿತಿ ಚಿಂತಾಜನಕವಾಗಿತ್ತು. ಅದರಂತೆ ಅವರು ಆಸ್ಪತ್ರೆಯ ಐಸಿಯುನಲ್ಲಿ ಬುಧವಾರ ಸಂಜೆ ಸಾವನ್ನಪ್ಪಿದ್ದಾರೆ.
ಈ ಮಾಹಿತಿಯನ್ನು ಅಲ್ಲೇ ಇದ್ದ ಪತಿಗೆ ವೈದ್ಯರು ತಿಳಿಸಿದ್ದಾರೆ. ಐಸಿಯುನಲ್ಲಿದ್ದ ಮೃತ ಪತ್ನಿ ಬಳಿಗೆ ತಕ್ಷಣ ಗಾಬರಿಯಿಂದ ಓಡೋಡಿ ಬಂದು ಅವರು ದುಃಖಿತರಾಗಿದ್ದಾರೆ. ಬಳಿಕ ತಾನು ಪ್ರಾರ್ಥನೆ ಮಾಡಬೇಕೆಂದು ಹೇಳಿ ಐಸಿಯುನಲ್ಲಿದ್ದ ಡಾಕ್ಟರ್ ನರ್ಸ್‌ಗಳನ್ನು ಹೊರಗೆ ಕಳುಹಿಸಿದ್ದಾರೆ. ಇದಾದ 10 ನಿಮಿಷದಲ್ಲಿ ತಮ್ಮಲ್ಲಿದ್ದ ಸರ್ಕಾರದ ಗನ್‌ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸೌಂಡ್ ಕೇಳುತ್ತಿದ್ದಂತೆ ಅಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ ಗಳು ಎಲ್ಲ ಓಡೋಡಿ ಬಂದಾಗ ಶೀಲಾದಿತ್ಯ ತಮ್ಮ ಪತ್ನಿ ಪಕ್ಕದಲ್ಲೇ ಮೃತದೇಹವಾಗಿ ಬಿದ್ದಿದ್ದರು. ಸದ್ಯ ಇವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಇಡೀ ಪೊಲೀಸ್ ಕುಟುಂಬಗಳು ಸಂತಾಪ ವ್ಯಕ್ತಪಡಿಸಿವೆ.