ಕುರಾನ್‌ಗೆ ಅವಮಾನ ಮಾಡಿರುವ ಆರೋಪ : ಠಾಣೆಗೆ ನುಗ್ಗಿ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿದ ಗುಂಪು


ನವದೆಹಲಿ: ಕುರಾನ್‌ಗೆ ಅವಮಾನಿಸಿದ್ದಾನೆಂದು ಎಂದು ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ಜೀವಂತ ಸುಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಖೈಬ‌ರ್ ಪುಂಖ್ಯಾ ಪ್ರಾಂತ್ಯದ ಸ್ವಾಟ್ ಜಿಲ್ಲೆಯಲ್ಲಿ ನಡಿದಿದೆ. ಜನರ ಗುಂಪು ವ್ಯಕ್ತಿಯನ್ನು ಥಳಿಸಿ ಆತನನ್ನು ಸುಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದೀಗ ಚರ್ಚೆಗೆ ಗ್ರಾಸವಾಗಿದೆ.

ಸಿಯಾಲ್‌ಕೋಟ್‌ನ ನಿವಾಸಿ ಮೃತ ವ್ಯಕ್ತಿ. ಈತ ಕುರಾನ್‌ ಗ್ರಂಥದ ಕೆಲವು ಪುಟಗಳನ್ನು ಹರಿದು ಸುಟ್ಟು ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ. ಅದರ ವೀಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಪೊಲೀಸ್‌ ಠಾಣೆಯ ಮುಂದೆಯೇ ಹತ್ಯೆ ಮಾಡಿ ಸುಡಲಾಗಿದೆ.


ಆತನ ಬಂಧನದ ಬೆನ್ನಲ್ಲೇ ಕುರಾನ್‌ಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ತಕ್ಷಣ ಗುಂಪೊಂದು ಪೊಲೀಸ್‌ ಠಾಣೆಗೆ ಆಗಮಿಸಿ ಸೆಲ್‌ನಲ್ಲಿದ್ದ ಆ ವ್ಯಕ್ತಿಯನ್ನು ಎಳೆದುತಂದು ಹತ್ಯೆ ಮಾಡಿ ಬಳಿಕ ಆತನ ಶವಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದೆ.

ಆ ಗುಂಪನ್ನು ಚದುರಿಸಲು ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಇದರ ಹೊರತಾಗಿಯೂ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಠಾಣೆಯೊಳಗಿದ್ದ ವ್ಯಕ್ತಿಯನ್ನು ಹೊರಗೆ ಎಳೆತಂದು ಹತ್ಯೆ ಮಾಡಿ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ಜನರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.