-->
1000938341
ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿಳಿಯಿತು 100 ಟನ್ ಚಿನ್ನ - ವಿದೇಶಿ ಬ್ಯಾಂಕ್ ಗಳಲ್ಲಿ ಠೇವಣಿಯಿಟ್ಟ ಚಿನ್ನ ತರಿಸಿದ ಆರ್ ಬಿ ಐ

ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿಳಿಯಿತು 100 ಟನ್ ಚಿನ್ನ - ವಿದೇಶಿ ಬ್ಯಾಂಕ್ ಗಳಲ್ಲಿ ಠೇವಣಿಯಿಟ್ಟ ಚಿನ್ನ ತರಿಸಿದ ಆರ್ ಬಿ ಐ


ನವದೆಹಲಿ: ಭಾರತದ ರಿಸರ್ವ್ ಬ್ಯಾಂಕ್ ಈ ಹಿಂದೆ ಇಂಗ್ಲೆಂಡ್‌ನಲ್ಲಿ ಠೇವಣಿ ಇಟ್ಟಿದ್ದ ಸುಮಾರು 100 ಟನ್ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ. 1991ರ ಬಳಿಕ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಆರ್‌ಬಿಐ ಮರಳಿ ತರಿಸಿದೆ.

2023-24ರ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ಮಾಹಿತಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನವನ್ನು ತರಲಾಗುವುದು ಎಂದು ಹೇಳಿದೆ. ಇದೀಗ ತಂದಿರುವ ಈ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು.

ವಿದೇಶದ ಬ್ಯಾಂಕುಗಳಲ್ಲಿ ಆರ್‌ಬಿಐ ವಿವಿಧ ಸಂದರ್ಭಗಳಲ್ಲಿ ಒಟ್ಟು 413.8 ಟನ್ ಚಿನ್ನವನ್ನು ಇಟ್ಟಿದೆ. ಕೆಲವು ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ९९ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್‌ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.

1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣ ಸಾಲ ಪಡೆಯಲು ಆರ್ ಬಿಐ ಬಳಿಯಿದ್ದ 46 ಟನ್ ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್‌ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್‌ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್ ಸಾಲ ಪಡೆದುಕೊಂಡಿತ್ತು.

ಕಳೆದ ಕೆಲವು ವರ್ಷಗಳಲ್ಲಿ 100 ಟನ್ ಚಿನ್ನವನ್ನು ಭಾರತಕ್ಕೆ ತರಲು ರಹಸ್ಯ ಯೋಜನೆ ಹಾಕಲಾಗಿತ್ತು. ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ಗೌಪ್ಯತೆ ಕಾಪಾಡಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯದ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ದೇಶಕ್ಕೆ ತರಲಾಗಿದೆ. ದೇಶದ 'ಸಾರ್ವಭೌಮ ಆಸ್ತಿ'ಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

ಮಾರ್ಚ್ 2023 ರ ಮಾಹಿತಿ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿತ್ತು. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ತೊಡಗಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಮರಳಿ ತಂದಿತ್ತು. 2019ರಲ್ಲಿ ಚಿನ್ನ ಸಂಗ್ರಹ 618.2 ಟನ್‌ಗೆ ಏರಿಕೆಯಾಗಿದ್ದರೆ 2020ರ ವೇಳೆಗೆ ಇದು 661.4 ಟನ್‌ಗೆ ಏರಿಕೆಯಾಗಿತ್ತು. 2021ರ ವೇಳೆಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ ಬರೋಬ್ಬರಿ 822.1 ಟನ್ ಚಿನ್ನದ ಸಂಗ್ರಹ ಹೊಂದಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇಡಲಾಗಿತ್ತು. ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಕಾರಣ ಆರ್‌ಬಿಐ ಈಗ ಚಿನ್ನವನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದೆ.

Ads on article

Advertise in articles 1

advertising articles 2

Advertise under the article