ಯಕ್ಷಗಾನಕ್ಕೂ ಬಂತು 'ರೇವಣ್ಣ ಅಪಹರಣ ಪ್ರಕರಣ' - VIDEO ವೈರಲ್



ಮಂಗಳೂರು: ಸದ್ಯ ಭಾರೀ ಸುದ್ದಿಯಲ್ಲಿರುವ ಎಚ್.ಡಿ.ರೇವಣ್ಣ ಅವರು ಮಾಡಿದ್ದರು ಎನ್ನಲಾದ ಮಹಿಳೆಯೊಬ್ಬರ ಅಪಹರಣ ಪ್ರಕರಣ ವಿಚಾರ ಈಗ ಯಕ್ಷಗಾನಕ್ಕೂ ಕಾಲಿಟ್ಟಿದೆ. ಇದೀಗ ಈ ವೀಡಿಯೋ ತುಣುಕು ವೈರಲ್ ಆಗುತ್ತಿದೆ.




ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಈ ವಿಚಾರ ಹಾಸ್ಯರೂಪದಲ್ಲಿ ಸೊಗಸಾಗಿ ಬಳಕೆಯಾಗಿದೆ. ಬಪ್ಪನಾಡು ಮೇಳದ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಹಾಗೂ ಅತಿಥಿ ಕಲಾವಿದ ಅರುಣ್ ಕುಮಾರ್ ಜಾರ್ಕಳ ಪ್ರಸ್ತುತ ಸನ್ನಿವೇಶವನ್ನು ಯಕ್ಷಗಾನದಲ್ಲಿ ಮೆರೆಸಿದ್ದಾರೆ. "ಹೆಣ್ಣುಮಕ್ಕಳ ವಿಚಾರಕ್ಕೆ ಹೋದರೆ ಪುರಾಣದಲ್ಲಿ ಏನಾಗಿದೆ ಗೊತ್ತೈತೇನ್ರೀ ಎಂದು ಅರುಣ್ ಕುಮಾರ್ ಜಾರ್ಕಳ ಅವರು ಪ್ರಶ್ನಿಸಿ, ಅವತ್ತು ಸೀತೆಯನ್ನು ಅಪಹರಿಸಿದಂಥ ರೇವಣ್ಣನ ಕಥೆ ಏನಾಗೈತೆ ಎಂದು ನಿಮಗೆ ಗೊತ್ತಲ್ಲ ಎಂದು ರಾವಣ ಹೆಸರನ್ನು ರೇವಣ್ಣ ಎಂದು ಬದಲಿಸಿ ಹೇಳುತ್ತಾರೆ. ಆಗ ದಿನೇಶ್ ಕೋಡಪದವು ಅವರು, ರೇವಣ್ಣ ಅಲ್ಲ ಸೀತೆಯನ್ನು ಅಪಹರಿಸಿದ್ದು, ರೇವಣ್ಣ ಬೇರೆಯಾರನ್ನೋ ಅಪಹರಿಸಿದ್ದು, ಎಂದು ಹೇಳುತ್ತಾರೆ‌. ಆಗ ಯಕ್ಷಗಾನ ನೋಡುತ್ತಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಾರೆ‌. 

'ಪರಕೆದ ಪಲ್ಲಕ್ಕಿ' ಎಂಬ ಬಪ್ಪನಾಡು ಮೇಳದ ಈ ತಿರುಗಾಟದ ಹೊಸ ಪ್ರಸಂಗದಲ್ಲಿ ಈ ಹಾಸ್ಯ ಬಳಕೆಯಾಗಿದೆ. ಮೇ 19ರಂದು ಬಪ್ಪನಾಡಿನಲ್ಲಿ ನಡೆದ ಯಕ್ಷಗಾನದಲ್ಲಿ ಅರುಣ್ ಕುಮಾರ್ ಜಾರ್ಕಳ ಅತಿಥಿ ಕಲಾವಿದರಾಗಿ ಭಾಗಿಯಾಗಿದ್ದರು‌‌. ಅಂದು ಈ ಸನ್ನಿವೇಶ ಹಾಸ್ಯವಾಗಿ ಬಳಕೆಯಾಗಿದೆ. ಒಟ್ಟು 19 ಸೆಕೆಂಡ್ ಇದ ವೀಡಿಯೊ ತುಣುಕು ಈಗ ವೈರಲ್ ಆಗುತ್ತಿದೆ.