ಕಾಸರಗೋಡು: ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ಲೈಂಗಿಕ ಕಿರುಕುಳ - ಕಿವಿಯೋಲೆ ಕಸಿದು ಪರಾರಿಯಾದ ದುರುಳ
Saturday, May 18, 2024
ಕಾಸರಗೋಡು: ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ದುರುಳನೊಬ್ಬ ನಸುಕಿನ ವೇಳೆ ಹೊತ್ತೊಯ್ದು ಲೈಂಗಿಕ ಕಿರುಕುಳ ನೀಡಿ ಕಿವಿಯೋಲೆಯನ್ನು ಕಸಿದು ಪರಾರಿಯಾಗಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ಮೇ 15ರಂದು ನಸುಕಿನ ವೇಳೆ 3ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ಪ್ರತಿದಿನವೂ ತನ್ನ ಅಜ್ಜಿಯೊಂದಿಗೆ ಮಲಗುತ್ತಿದ್ದಳು. ಆದರೆ ಅಂದು ಅಜ್ಜಿ ಸಂಬಂಧಿಕರ ಮನೆಗೆ ತೆರಳಿದ್ದರು. ಆದ್ದರಿಂದ ಆಕೆ ತನ್ನ ಅಜ್ಜನೊಂದಿಗೆ ಮಲಗಿದ್ದಳು. ನಸುಕಿನಲ್ಲಿ ಮೂರು ಗಂಟೆಗೆ ಎದ್ದು ಎಂದಿನಂತೆ ಅಜ್ಜ ದನಗಳನ್ನು ಹಾಲು ಕರೆಯಲೆಂದು ತೆರಳಿದ್ದರು. ಕೋಣೆಯ ಬಾಗಿಲನ್ನು ಎಳೆದುಕೊಂಡು ಹೋಗಿದ್ದರು. ಇದೇ ಹೊತ್ತಿನಲ್ಲಿ ಬಾಲಕಿಯನ್ನು ಹೊತ್ತೊಯ್ಯಲಾಗಿತ್ತು. 3.30ಕ್ಕೆ ಅಜ್ಜ ಮರಳಿ ನೋಡಿದಾಗ, ಬೆಡ್ ನಲ್ಲಿ ಬಾಲಕಿ ಇರಲಿಲ್ಲ.
ಬಾಲಕಿಯನ್ನು ದುರುಳ 1ಕಿಮೀ ದೂರಕ್ಕೆ ಹೊತ್ತೊಯ್ದಿದ್ದು, ಬೊಬ್ಬೆ ಹಾಕದಂತೆ ಬಾಯಿಗೆ ಕೈಯನ್ನು ಗಟ್ಟಿ ಹಿಡಿದುಕೊಂಡಿದ್ದ. ಬೊಬ್ಬೆ ಹಾಕಿದರೆ ಕೊಂದು ಹಾಕುತ್ತೇನೆಂದು ಹೆದರಿಸಿ ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಬಾಲಕಿಯನ್ನು ಬಿಟ್ಟು ಹೋಗಿದ್ದಾನೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಬಾಲಕಿ ಅಲ್ಲಿನ ಪರಿಸರದ ಮನೆಯೊಂದಕ್ಕೆ ಹೋಗಿ ಬೆಲ್ ಹಾಕಿದ್ದಾಳೆ. ಬಾಗಿಲು ಬಡಿದರೂ ಎಚ್ಚರಗೊಳ್ಳದ ಕಾರಣ ಪಕ್ಕದ ಮನೆಗೂ ಹೋಗಿ ಬಾಗಿಲು ಬಡಿದಿದ್ದಾಳೆ. ಆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ತನ್ನ ಮನೆಯವರನ್ನು ಕರೆಯುವಂತೆ ತಿಳಿಸಿ, ತಂದೆಯ ಮೊಬೈಲ್ ನಂಬರ್ ಹೇಳಿ ಬರಹೇಳಿದ್ದಾಳೆ.
ತಂದೆ, ತಾಯಿ ಮತ್ತು ಇನ್ನೊಬ್ಬಳು ಸಣ್ಣ ತಂಗಿ ಪಕ್ಕದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲು ತೆರೆದುಕೊಂಡಿದ್ದರಿಂದ ಅಲ್ಲಿಂದಲೇ ಬಾಲಕಿಯನ್ನು ಹೊತ್ತೊಯ್ದಿದ್ದಾರೆ ಎನ್ನುವ ಸಂಶಯ ಉಂಟಾಗಿತ್ತು. ಪೊಲೀಸರು ಮೊದಲು ರಾಬರಿ ಕೇಸು ದಾಖಲಿಸಿದ್ದರು. ಬಾಲಕಿಯ ಮೆಡಿಕಲ್ ಚೆಕಪ್ ನಲ್ಲಿ ರೇಪ್ ಆಗಿರುವುದು ಕಂಡುಬಂದಿದ್ದರಿಂದ ಪೋಕೋ ಕಾಯ್ದೆ ದಾಖಲು ಮಾಡಿದ್ದು ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಮುಖ, ಕುತ್ತಿಗೆಯಲ್ಲಿ ಪರಚಿದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.