ಬೇಸಿಗೆಯ ಸಮಯದಲ್ಲಿ ನೆಮ್ಮದಿಯ ನಿದ್ದೆ ಮಾಡಲು ಇಲ್ಲಿದೆ ಟಿಪ್ಸ್
Saturday, May 4, 2024
ಭಾರತದಾದ್ಯಂತ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಮನುಷ್ಯರು ಸೇರಿದಂತೆ ಭೂಮಿಯ ಮೇಲಿರುವ ಸಕಲ ಪ್ರಾಣಿಗಳು ತತ್ತರಿಸಿ ಹೋಗಿವೆ. ಹಗಲಿನಲ್ಲಿ ಹೊರಗಡೆ ಹೋಗಲು ಆಗುತ್ತಿಲ್ಲ . ಹಿಂದೆಲ್ಲಾ ರಾತ್ರಿ ವೇಳೆಯಾದ್ರೂ ವಾತಾವರಣ ತಂಪಾಗಿರುತ್ತಿತ್ತು. ಆದರೆ ಈಗ ರಾತ್ರಿ ಸೆಖೆಯಿಂದ ನೆಮ್ಮದಿಯಾಗಿ ನಿದ್ದೆ ಮಾಡುವುದು ಅಸಾಧ್ಯವಾಗಿದೆ. ವಿಪರೀತ ಬಿಸಿ, ಸೆಖೆಯ ಕಾರಣದಿಂದ ನಿದ್ದೆಯ ಕೊರತೆ ಕಾಡುತ್ತಿದೆ. ಹಾಗಾದರೆ ಸೆಖೆಯ ನಡುವೆಯು ನೆಮ್ಮದಿಯ ನಿದ್ದೆ ಬರಬೇಕು ಅಂದ್ರೆ ಈ ಸರಳ ಟಿಪ್ಸ್ಗಳನ್ನು ಪಾಲಿಸಿ.
ಐಸ್‌ಪ್ಯಾಕ್ ಬಳಸಿ
ನಿಮ್ಮ ದೇಹ ಅತಿಯಾದ ಶಾಖದಿಂದ ಬಳಲುತ್ತಿದ್ದರೆ ಐಸ್ ಪ್ಯಾಕ್ ಬಳಸುವ ಮೂಲಕ ದೇಹವನ್ನು ತಂಪಾಗಿ ಇರಿಸಿಕೊಳ್ಳಬಹುದು. ನಿಮ್ಮ ಮಣಿಕಟ್ಟುಗಳು, ಕುತ್ತಿಗೆ, ಮೊಣಕೈಗಳು, ತೊಡೆಸಂದು, ಕಣಕಾಲುಗಳು ಮತ್ತು ಮೊಣಕಾಲುಗಳ ಹಿಂದಿನ ನಾಡಿಗಳ ಮೇಲೆ ಐಸ್‌ಪ್ಯಾಕ್ ಇರಿಸಿಕೊಳ್ಳುವ ಮೂಲಕ ದೇಹವನ್ನು ತಂಪಾಗಿಸಿರಬಹುದು. ಜೊತೆಗೆ ಇದರಿಂದ ನಿದ್ದೆಯು ಚೆನ್ನಾಗಿ ಬರುತ್ತದೆ.
ಲೈಟ್ ಆನ್ ಕಡಿಮೆ ಮಾಡಿ
ಬೇಸಿಗೆಯಲ್ಲಿ ಲೈಟ್ ಬೆಳಕು ಕೂಡ ಮನೆಯೊಳಗಿನ ತಾಪಮಾನ ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಲೈಟ್ ಬಳಸಿ. ಹೈವೋಲ್ವೇಜ್ ಲೈಟ್‌ಗಳನ್ನು ಉರಿಸದೇ ಇರುವುದು ಉತ್ತಮ. ಕೋಣೆಯಲ್ಲಿ ಮಲಗುವ ಅರ್ಧ ಗಂಟೆ ಮುಂಚೆ ಲೈಟ್ ಆಫ್ ಮಾಡಿ ಇಡಿ. ನಂತರ ಮಲಗಿ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿ
ಬೇಸಿಗೆಯಲ್ಲಿ ಲೈಟ್‌ಗಳಂತೆ ಮೊಬೈಲ್, ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಸೆಖೆ ಹೆಚ್ಚುವಂತೆ ಮಾಡುತ್ತದೆ. ಇದರ ಬೆಳಕು ಹಾಗೂ ಕಿರಣಗಳು ಕೋಣೆಯ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ . ಹಾಗಾಗಿ ಮಲಗಲು ಒಂದು ಗಂಟೆ ಇರುವಾಗಲೇ ಇವುಗಳಿಂದ ದೂರ ಇರುವುದು ಉತ್ತಮ.
ರಾತ್ರಿಯ ವೇಳೆ ಕಾಟನ್ ಬಟ್ಟೆ ಧರಿಸಿ
ರಾತ್ರಿ ಮಲಗಿದಾಗ ನಿದ್ದೆ ಬಾರದೇ ಇರಲು ಮತ್ತೊಂದು ಪ್ರಮುಖ ಕಾರಣ ಎಂದರೆ ನಾವು ಧರಿಸುವ ಬಟ್ಟೆ. ಬೇಸಿಗೆಯಲ್ಲಿ ಮಲಗುವಾಗ ಸಾಧ್ಯವಾದಷ್ಟು ಸಡಿಲ ಬಟ್ಟೆ ಧರಿಸಬೇಕು. ಕಾಟನ್ ಬಟ್ಟೆಗಳಿಗೆ ಆದ್ಯತೆ ನೀಡಿ. ಇದು ಚರ್ಮದ ಆರೋಗ್ಯಕ್ಕೂ ಉತ್ತಮ.
ಅತಿಯಾದ ವ್ಯಾಯಾಮ ಸಲ್ಲ
ಬೇಸಿಗೆಯಲ್ಲಿ ಸಂಜೆ ವೇಳೆಗೆ ಅತಿಯಾಗಿ ದೇಹ ದಂಡಿಸುವುದರಿಂದ ಕೂಡ ನಿದ್ದೆಯ ಸಮಸ್ಯೆ ಕಾಡಬಹುದು. ಇದು ಸೆಖೆ ಹೆಚ್ಚಲು ಇನ್ನೊಂದು ಪ್ರಮುಖ ಕಾರಣವಾಗುತ್ತದೆ. ಆ ಕಾರಣಕ್ಕೆ ಬೇಸಿಗೆಯ ದಿನಗಳಲ್ಲಿ ಸಾಧ್ಯವಾದಷ್ಟು ದೇಹದಂಡನೆಯನ್ನು ಕಡಿಮೆ ಮಾಡಿ.
ಈ ಎಲ್ಲಾ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ನೆಮ್ಮದಿಯ ನಿದ್ದೆ ಮಾಡಬಹುದು. ನಿದ್ದೆಯ ಕೊರತೆಯಿಂದ ಹಗಲಿನ ವೇಳೆಯಲ್ಲೂ ಮಂಕಾದಂತೆ ಅನ್ನಿಸಬಹುದು.
ದಿನವನ್ನು ಸುಗಮವಾಗಿಸಲು ರಾತ್ರಿ ನೆಮ್ಮದಿ ನಿದ್ದೆ ಮಾಡಲು ಪ್ರಯತ್ನ ಮಾಡಿ