ಬೆಳ್ತಂಗಡಿ: ಕಾರ್ಯಕರ್ತರನ್ನು ಮುಟ್ಟಿದ್ರೆ ಪೊಲೀಸರ ಕಾಲರ್ ಹಿಡಿದು ಎಳೆದು ಹಾಕುತ್ತೇನೆ - ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಹರೀಶ್ ಪೂಂಜ
Monday, May 20, 2024
ಬೆಳ್ತಂಗಡಿ: ಕಾರ್ಯಕರ್ತರನ್ನು ಮುಟ್ಟಿದರೆ ಪೊಲೀಸರ ಕಾಲರ್ ಹಿಡಿದು ಎಳೆದು ಹಾಕುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇಂದು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಅಕ್ರಮ ಕಲ್ಲಕ್ವಾರೆ ನಡೆಸುತ್ತಿರುವ ಆರೋಪದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕು ಬಿಜೆಪಿ ಯುವಮೋರ್ಚ ಮುಖಂಡ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ತನ್ನ ಆಪ್ತನ ಬಂಧಿಸಿರುವ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ರಾತ್ರೋರಾತ್ರಿ ಬೆಳ್ತಂಗಡಿ ಠಾಣೆಯ ಮುಂಭಾಗ ಧರಣಿ ನಡೆಸಿದ್ದಲ್ಲದೆ, 'ಠಾಣೆ ಏನು ನಿಮ್ಮ ಅಪ್ಪಂದಾ' ಎಂದು ಪಿಎಸ್ಐಗೇ ಧಮ್ಕಿ ಹಾಕಿದ್ದರು.
ಬಂಧನದ ವಿಚಾರದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗ ಇಂದು ನಡೆದ ಪ್ರತಿಭಟನೆಯಲ್ಲಿ 'ಕಾರ್ಯಕರ್ತರನ್ನು ಮುಟ್ಟಿದರೆ ಕಾಲರ್ ಹಿಡಿದು ಎಳೆದು ಹಾಕುತ್ತೇನೆ' ಎಂದು ಮತ್ತೆ ಪೊಲೀಸರ ವಿರುದ್ಧ ಅವಾಜ್ ಹಾಕಿದ್ದರೆ. ಕಾರ್ಯಕರ್ತರಿಗೆ, ಮತದಾರರಿಗೆ ಅನ್ಯಾಯವಾದದಲ್ಲಿ ತಾನು ಜೈಲಿನಲ್ಲಿ ಕುಳಿತುಕೊಳ್ಳಲು ರೆಡಿಯಿದ್ದೇನೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ತಲೆಯಲ್ಲಿ ಕೂದಲಿಲ್ಲ. ಕೂದಲೂ ಮಾತ್ರ ಅಲ್ಲ ಬುದ್ಧಿಯೂ ಇಲ್ಲ. ತಾನು ಅವರಿಗೆ ರಾತ್ರಿ ಎಷ್ಟು ಸಲ ಕಾಲ್ ಮಾಡಿದರೂ ನನ್ನ ಫೋನ್ ಕರೆಗೆ ಉತ್ತರಿಸಲಿಲ್ಲ. ಎಸ್ಪಿಯವರು ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯ ವಿರುದ್ಧವೂ ಹರೀಶ್ ಪೂಂಜ ವ್ಯಂಗ್ಯವಾಡಿದ್ದಾರೆ.