'ಪ್ರಜ್ವಲ್ ಎಲ್ಲೇ ಇದ್ದರೂ ಬೇಗ ಭಾರತಕ್ಕೆ ಬಾ' ಮಾಜಿ ಪ್ರಧಾನಿ ದೇವೇಗೌಡ ಮೊಮ್ಮಗನಿಗೆ ಖಡಕ್ ವಾರ್ನಿಂಗ್



ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣ ಕೊರಳಿಗೆ ಉರುಳಾಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭಾರತಕ್ಕೆ ವಾಪಸ್‌ ಆಗಿ ಎಸ್ಐಟಿ ಮುಂದೆ ಶರಣಾಗುವಂತೆ ಹಲವು ಬಾರಿ ಸೂಚಿಸಿದರು ಪ್ರಯೋಜನವಾಗಿಲ್ಲ. ಇದೀಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರೇ 'ಎಲ್ಲೇ ಇದ್ದರೂ ತಕ್ಷಣ ಭಾರತಕ್ಕೆ ಮರಳುವಂತೆ' ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಜೆಡಿಎಸ್‌ ಅಧಿಕೃತ ಪ್ರಕಟಣೆ ಹೊರಡಿಸಿದೆ. ಜನರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಲು ತೊಡಗಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ಅವರನ್ನು ಟೀಕಿಸಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು. ಅದರೂ ನಾನು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉಪ್ಪೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ.

ಪ್ರಜ್ವಲ್ ಎಲ್ಲಿದ್ದರೂ ಬಂದು, ಪೊಲೀಸ್ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸು ಎಂದು ಮುಲಾಜಿಲ್ಲದೆ ಹೇಳಬಲ್ಲೆ. ಇದು ಅವನಿಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆ. ನೀನು ಮಾಡಿದ್ದೀಯ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ನೀನು ತಲೆಬಾಗದಿದ್ದಲ್ಲಿ ನೀನು ನನ್ನ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದರೆ ತಕ್ಷಣ ಬಂದು ಪೊಲೀಸರಿಗೆ ಶರಣಾಗು ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu