-->
1000938341
ಬಾತ್​ರೂಮ್​ನಲ್ಲಿ ಯುವತಿಯ ಶವ ಪತ್ತೆ ಪ್ರಕರಣ: 2 ಸಾವಿರ ರೂಪಾಯಿಗೆ ಕೃತ್ಯ ಎಸಗಿದ್ದ ಅಪ್ರಾಪ್ತನ ಬಂಧನ!

ಬಾತ್​ರೂಮ್​ನಲ್ಲಿ ಯುವತಿಯ ಶವ ಪತ್ತೆ ಪ್ರಕರಣ: 2 ಸಾವಿರ ರೂಪಾಯಿಗೆ ಕೃತ್ಯ ಎಸಗಿದ್ದ ಅಪ್ರಾಪ್ತನ ಬಂಧನ!

 


 


ಬೆಂಗಳೂರು: ಇತ್ತೀಚಿಗೆ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸಿದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಪ್ರಬುದ್ಧಾಳನ್ನು ಕೇವಲ  ಎರಡು ಸಾವಿರ ರೂಪಾಯಿ ಹಣದ ವಿಚಾರಕ್ಕೆ ಆಕೆಯ ಸಹೋದರನ ಸ್ನೇಹಿತನೇ ಭೀಕರವಾಗಿ ಹತ್ಯೆಗೈದಿರುವುದು ತನಿಖೆಯಲ್ಲಿ ಬಯಲಾಗಿದೆ.

 

ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟ್ನಲ್ಲಿರುವ ಮನೆಯಲ್ಲಿ  ಮೇ 15ರಂದು ಘಟನೆ ನಡೆದಿತ್ತು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಬುದ್ಧಾ (19) ಕತ್ತು ಹಾಗೂ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೃತಳ ತಾಯಿ ಸೌಮ್ಯ ಕೆ.ಆರ್. ನೀಡಿದ ದೂರಿನ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕೃತ್ಯ ಎಸಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

 

ಹತ್ಯೆಯಾದ ಪ್ರಬುದ್ದಾ ಅವರ ಸಹೋದರ ಹಾಗೂ ಆರೋಪಿ  ಗೆಳೆಯರಾಗಿದ್ದು, ಅದೇ ಸಲುಗೆಯಲ್ಲಿ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆಟವಾಡುವಾಗ ತನ್ನ ಇನ್ನೊಬ್ಬ ಸ್ನೇಹಿತನ ಕನ್ನಡಕ ಮುರಿದಿದ್ದ ಆರೋಪಿಗೆ ಅದನ್ನು ಸರಿ ಮಾಡಿಸಿಕೊಡಲು ಹಣದ ಅವಶ್ಯಕತೆಯಿತ್ತು. ಕೃತ್ಯಕ್ಕಿಂತ ಕೆಲವು ದಿನಗಳ ಹಿಂದಷ್ಟೇ ಪ್ರಬುದ್ಧಾಳ ಮನೆಗೆ ಬಂದಿದ್ದ ಆತ ಇದಕ್ಕಾಗಿಯೇ ಆಕೆಯ ಪರ್ಸ್ನಲ್ಲಿದ್ದ ಎರಡು ಸಾವಿರ ರೂ ಹಣ ಕಳ್ಳತನ ಮಾಡಿದ್ದ.

 

ವಿಚಾರ ತಿಳಿದ ಪ್ರಬುದ್ಧಾ, ಹಣ ವಾಪಸ್ ನೀಡುವಂತೆ ಆರೋಪಿಯನ್ನು ಕೇಳಿದ್ದರು. ಮೇ 15ರಂದು ಮಧ್ಯಾಹ್ನ ಪ್ರಬುದ್ಧಾ ಒಬ್ಬರೇ ಇದ್ದಾಗ ಆಕೆಯ ಮನೆಗೆ ಬಂದಿದ್ದ ಆರೋಪಿ, ಹಣ ಕದ್ದಿರುವುದನ್ನು ಕ್ಷಮಿಸುವಂತೆ ಒತ್ತಾಯಿಸಿ ಆಕೆಯ ಕಾಲು ಹಿಡಿದಾಗ ಆಕೆ ಬಿದ್ದು ಪ್ರಜ್ಞಾಹೀನಳಾಗಿದ್ದರು. ಅದೇ ಸಂದರ್ಭವನ್ನು ಬಳಸಿಕೊಂಡಿದ್ದ ಆರೋಪಿ ಆಕೆಯ ಕೈ ಮತ್ತು ಕತ್ತು ಕೊಯ್ದು ಹತ್ಯೆಗೈದಿದ್ದ. ಬಳಿಕ ಟೆರೇಸ್ ಬಳಸಿ ಸ್ಥಳದಿಂದ ಪರಾರಿಯಾಗಿದ್ದ.

 

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಬ್ರಹ್ಮಣ್ಯಪುರ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಅನುಮಾನಾಸ್ಪದವಾಗಿ ಓಡಾಡಿರುವುದು ಪತ್ತೆಯಾಗಿತ್ತು. ಬಳಿಕ ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯದ ವೃತ್ತಾಂತವನ್ನು ತಿಳಿಸಿದ್ದಾನೆ‌. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶಾನುಸಾರ ಬಾಲಮಂದಿರದ ಸುಪರ್ದಿಗೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ಹೇಳಿದರು.

Ads on article

Advertise in articles 1

advertising articles 2

Advertise under the article