-->
1000938341
"ನಂಬಿದ ದೈವ ಕೈಬಿಡುವುದಿಲ್ಲ ಎನ್ನುವುದಕ್ಕೆ ಕೊಡಮಣಿತ್ತಾಯನ ಸಾನಿಧ್ಯವೇ ಸಾಕ್ಷಿ"-ಪಲಿಮಾರು ಶ್ರೀ

"ನಂಬಿದ ದೈವ ಕೈಬಿಡುವುದಿಲ್ಲ ಎನ್ನುವುದಕ್ಕೆ ಕೊಡಮಣಿತ್ತಾಯನ ಸಾನಿಧ್ಯವೇ ಸಾಕ್ಷಿ"-ಪಲಿಮಾರು ಶ್ರೀ


ಸುರತ್ಕಲ್: "ನಂಬಿದ ದೈವ ನಮ್ಮನ್ನು ಕೈಬಿಡುವುದಿಲ್ಲ ಅನ್ನುವುದಕ್ಕೆ ಶಿಬರೂರು ಕೊಡಮಣಿತ್ತಾಯ ದೈವವೇ ಸಾಕ್ಷಿ. ಇಂದು ಚುನಾವಣೆ ಇದ್ದರೂ ಯಾವುದೇ ಅಡಚಣೆ ಎದುರಾಗದೆ ದೈವದ ಕಾರಣಿಕದಿಂದ ಇಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಬಂಗಾರದ ಪಲ್ಲಕ್ಕಿ, ದ್ವಾರ, ಗೋಪುರ ಸಹಿತ ಬ್ರಹ್ಮಕುಂಭಾಭಿಷೇಕ ನಡೆದು ನಾಗಮಂಡಲ ನಡೆಯುತ್ತಿದೆ. ಇದೆಲ್ಲವೂ ದೈವದ ಪವಾಡದಿಂದಷ್ಟೇ ಸಾಧ್ಯ. ಇಂತಹ ಶಕ್ತಿ ಸಾನಿಧ್ಯದಲ್ಲಿ ಜರುಗಿದ ದೈವಿಕ, ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ" ಎಂದು ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಪಲಿಮಾರು ಮಠ ಇದರ ಶ್ರೀ ವಿದ್ಯಾಧೀಶ ಶ್ರೀಪಾದರು ಹೇಳಿದರು.


ಅವರು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಿನ್ನೆಲೆಯಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತಾಡುತ್ತಾ, "ಶ್ರೀ ಕ್ಷೇತ್ರ ಶಿಬರೂರು ತುಳುನಾಡಿನ ಪುರಾಣ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೆಲೆಸಿರುವ ಉಳ್ಳಾಯ, ಕೊಡಮಣಿತ್ತಾಯ ದೈವ ಭಕ್ತರ ಸಂಕಷ್ಟ ಕಳೆದು ರಕ್ಷಿಸುತ್ತಾನೆ. ದೈವಕ್ಕೆ ಯಾವುದೇ ಸೇವೆ ಸಲ್ಲಬೇಕಾದರೂ ದೈವದ ಮುಂದೆ ಒಟ್ಟಾಗಿ ಪ್ರಾರ್ಥಿಸಿದರೆ ಸಾಕು ಕೊಡಮಣಿತ್ತಾಯನೇ ಅದನ್ನು ಭಕ್ತರ ಮೂಲಕ ಪೂರೈಸಿಕೊಳ್ಳುತ್ತಾನೆ" ಎಂದರು. 


ಶಿಲ್ಪಾ ಶೆಟ್ಟಿ ಮಾತಾಡಿ, 'ಶ್ರೀ ಕ್ಷೇತ್ರದ ದೈವ ಕೊಡಮಣಿತ್ತಾಯನ ಅನುಗ್ರಹದಂತೆ ನಾನಿಲ್ಲಿ ಬಂದಿದ್ದೇನೆ. ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು ಅನ್ನೋದು ನನಗೆ ಹೆಮ್ಮೆ. ಮುಂದೆ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತೇನೆ. ದೈವದ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ" ಎಂದರು.


ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತಾಡುತ್ತಾ, "ನಾಗಮಂಡಲದಿಂದ ನಾಡಿಗೆ ಮಂಗಲವಾಗುತ್ತದೆ. ಸಂಪತ್ತನ್ನು ಭೋಗ ಮಾಡಬೇಕು ಉಳಿದ ಸ್ವಲ್ಪ ಭಾಗವನ್ನು ದಾನ ಮಾಡಬೇಕು, ಇದೆರಡು ಕೂಡ ಮಾಡದಿದ್ದರೆ ಸಂಪತ್ತು ನಾಶವಾಗುತ್ತೆ" ಎಂದರು.

ಸಗ್ರಿ ಗೋಪಾಲಕೃಷ್ಣ ಸಾಮಗರು ಮಾತನಾಡಿ, "ತುಳುನಾಡಿನಲ್ಲಿ ನಾಗಾರಾಧನೆ ಪ್ರಮುಖವಾದುದು. ನಾಗನ ರಕ್ಷಣೆಗೆ ನಾಗಬನಗಳನ್ನು ರಕ್ಷಣೆ ಮಾಡೋಣ. ಪ್ರಕೃತಿಯ ಮಧ್ಯೆ ಇರುವ ಇಲ್ಲಿನ ಸಾನಿಧ್ಯ ವಿಶೇಷವಾಗಿ ಬೆಳಗುತ್ತದೆ" ಎಂದರು.

ಜಾನಪದ ವಿಧ್ವಾಂಸ ಗಣೇಶ್ ಅಮೀನ್ ಸಂಕಮಾರ್ ಮಾತಾಡಿ, "ಶಿಬರೂರಿನ ಮಣ್ಣು ಸಾಮಾನ್ಯ ಮಣ್ಣಲ್ಲ, ಇಲ್ಲಿನ ಮಣ್ಣಿಗೆ ಜನರ ಕಷ್ಟ ಪರಿಹರಿಸುವ ಶಕ್ತಿಯಿದೆ. ವಿಷವನ್ನು ಶರೀರದಿಂದ ತೆಗೆದು ಜನರ ಪ್ರಾಣ ಕಾಯುವ ಪುಣ್ಯ ಕ್ಷೇತ್ರ ಶಿಬರೂರು. ಹಿಂದೆ ತ್ಯಾಂಪ ಶೆಟ್ಟಿ ಅವರಂತಹ ವ್ಯಕ್ತಿ ಇಲ್ಲಿನ ಮಣ್ಣು ಮತ್ತು ತೀರ್ಥದ ಮೇಲೆ ವಿಶ್ವಾಸ ಇರಿಸಿಕೊಂಡು ಜನರಿಗೆ ವಿಷ ಜಂತು ಕಡಿದಾಗ ಅವರನ್ನು ರಕ್ಷಿಸುತ್ತಿದ್ದರು. ಅಂತಹ ಪುಣ್ಯಾತ್ಮ ನೆಲೆಸಿದ್ದ ಊರು ಇಂದಿಗೂ ಜನರ ಕಷ್ಟ ಕಾರ್ಪಣ್ಯ ಪರಿಹರಿಸುವ ಸಾನಿಧ್ಯವಾಗಿ ನೆಲೆನಿಂತಿದೆ" ಎಂದರು.

ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ, ಹರಿನಾರಾಯಣ ದಾಸ ಅಸ್ರಣ್ಣ, ಜಾನಪದ ವಿಧ್ವಾಂಸ ಗಣೇಶ್ ಅಮೀನ್ ಸಂಕಮಾರ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸುನಂದಾ ಶೆಟ್ಟಿ, ಅಡು ಶಂಕರ ಶೆಟ್ಟಿ, ಹೇರಂಭ ಕೆಮಿಕಲ್ ಇಂಡಸ್ಟ್ರಿಸ್ ಮಾಲಕ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ಭಂಡಾರಮನೆ, ವಾಮಯ್ಯ ಬಿ.ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಹರೀಶ್ ಕೇಶವ ಶೆಟ್ಟಿ, ಡಾ. ಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ, ಅನುಸೂಯ, ಶ್ಯಾಮಲಾ,  ಬ್ರಹ್ಮಕುಂಭಾಭಿಷೇಕ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೋಂಜಾಲುಗುತ್ತು, ರಾಮಚಂದ್ರ ಶೆಟ್ಟಿ ಸೂರತ್, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.


ಪ್ರತೀಕ್ಷಾ ಪ್ರದ್ಯುಮ್ನ ರಾವ್ ಪ್ರಾರ್ಥಿಸಿದರು. ಸಮಿತಿ ಕಾರ್ಯಧ್ಯಕ್ಷ ಪ್ರದ್ಯುಮ್ನ ರಾವ್ ಅತಿಥಿಗಳನ್ನು ಸ್ವಾಗತಿಸಿದರು.
ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕೊರ್ಯಾರು ಪ್ರಾಸ್ತಾವಿಕ ಮಾತನ್ನಾಡಿದರು.
ವಿಜೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article