ಸಂಸದ ಪ್ರಜ್ವಲ್ ರೇವಣ್ಣನ ಮೇಲೆ ಮೊದಲ ಎಫ್ಐಆರ್ ದಾಖಲು: ಸಂತ್ರಸ್ತೆಯಿಂದ ದೂರು ದಾಖಲು


ಹಾಸನ: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಈ ಬಗ್ಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಮೊದಲ ಎಫ್ ಐ ಆರ್ ದಾಖಲಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಹಲವಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ಪೆನ್ ಡ್ರೈವ್ ವೀಡಿಯೋ ಹರಿದಾಡಿತ್ತು.

ಇದೀಗ ಸಂಸದ ಪ್ರಜ್ವಲ್ ವಿರುದ್ಧವೇ ಸಂತ್ತಸ್ತ ಮಹಿಳೆ ದೂರು ನೀಡಿದ್ದು ಪದೇ ಪದೆ ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಆರೋಪಿಸಲಾಗಿದೆ. ಮಹಿಳೆಯ ಘನತೆಗೆ ಧಕ್ಕೆ ಆರೋಪ ಸೇರಿ ಐಪಿಸಿ ಸೆಕ್ಷನ್ 354A 354 D ಹಾಗೂ 509 ಅಡಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿಡಿಯೋ ವೈರಲ್ ಬಗ್ಗೆ ರಾಜ್ಯ ಸರ್ಕಾರ, ಎಸ್‌ಐಟಿ ತನಿಖೆಗೆ ಆದೇಶ ಮಾಡುತ್ತಿದ್ದಂತೆ ಮೊದಲ ಎಫ್‌ಐಆ‌ರ್ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದೆ. 

ಈ ಅಶ್ಲೀಲ ವಿಡಿಯೋಗಳು ಚುನಾವಣೆಗೆ ಎರಡು ದಿನ ಇರುವಾಗ ಲೀಕ್ ಆಗಿತ್ತು. ಸುದ್ದಿ ವಾಹಿನಿಗಳಲ್ಲಿ ವೀಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ಮತದಾನ ಮುಗಿದ ಮರುದಿನವೇ ನಸುಕಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಪೂರ್ವ ನಿಯೋಜಿತ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆಯೇ, ತನಿಖೆಯ ಭಯದಲ್ಲಿ ತಲೆಮರೆಸಿಕೊಳ್ಳುವ ಉದ್ದೇಶ ಇದೆಯೇ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.