-->
1000938341
ಮಂಗಳೂರು: ಬಿಜೆಪಿ ಕಾರ್ಯಕರ್ತನಿಂದ ಪೊಲೀಸ್, ಪತ್ರಕರ್ತರೊಂದಿಗೆ ಅನುಚಿತ ವರ್ತನೆ - ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಪಾಠ

ಮಂಗಳೂರು: ಬಿಜೆಪಿ ಕಾರ್ಯಕರ್ತನಿಂದ ಪೊಲೀಸ್, ಪತ್ರಕರ್ತರೊಂದಿಗೆ ಅನುಚಿತ ವರ್ತನೆ - ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಪಾಠ


ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಮತಗಟ್ಟೆ ಹೊರಗಡೆ ಬಹಳಷ್ಟು ಹೊತ್ತು ಮೀಡಿಯಾ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಕಾರ್ಯಕರ್ತನೊಬ್ಬ ಮತಗಟ್ಟೆಯ ಹೊರಗಡೆ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತ ವರ್ತನೆ ತೋರಿರುವ ಘಟನೆ ನಗರದ ಕಪಿತಾನಿಯೋ ಶಾಲೆಯ ಮತಗಟ್ಟೆ ಬಳಿ ನಡೆದಿದೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದ ವೇಳೆ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಂಡಿದ್ದರು. ಆಗ ಅಲ್ಲಿಯೇ ಇದ್ದ ಬಿಜೆಪಿ ಅಭ್ಯರ್ಥಿ  ಸಂದೀಪ್ ಎಕ್ಕೂರು ಎಂಬಾತ "ಎಷ್ಟು ಹೊತ್ತು ಅಭ್ಯರ್ಥಿಯ ಪ್ರತಿಕ್ರಿಯೆ ಪಡೆಯುವುದು''ಎಂದು ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಸೇರಿದಂತೆ ಪೊಲೀಸರು ಆತನಿಗೆ ಅಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಆಗ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ತಳ್ಳಾಟ - ನೂಕಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದಂತಾಗಿದೆ. 


ಆಗ ಆತನೊಂದಿಗೆ ಇದ್ದವರು ಸಮಾಧಾನ ಮಾಡಲೆತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ಬೆಳೆಸಿದ್ದಾನೆ. ಆಗ ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ "ನಾನು ನಿನ್ನ ಮೇಲೆ ಕೇಸ್ ದಾಖಲಿಸಿ, ಜೈಲಿಗಟ್ಟುತ್ತೇನೆ'' ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ಅಲ್ಲಿಂದ ಹಿಂದುರಿಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮದ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೆ ತಂಡದಿಂದ ವಾಗ್ವಾದ ನಡೆದಿದೆ. ಆಗ ಸ್ಥಳದಲ್ಲಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.


ಈ ಬಗ್ಗೆ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪ್ರತಿಕ್ರಿಯಿಸಿ, ಬಿಜೆಪಿ ಮಿತ್ರರಲ್ಲಿ ನಾನು ವಿನಂತಿ ಮಾಡಿಕೊಳ್ಳುದೇನೆಂದರೆ, ಚುನಾವಣೆಯನ್ನು ಹಬ್ಬದ ರೀತಿ ಪ್ರೀತಿಯಿಂದ ಆಚರಿಸೋಣ. ಚುನಾವಣೆಯಲ್ಲಿ ಏನೇ ಫಲಿತಾಂಶ ಬರಬಹುದು ಇದಕ್ಕೆ ಹತಾಶರಾಗುವ ಅವಶ್ಯಕತೆಯಿಲ್ಲ. ಅನವಶ್ಯಕ ಕಿರಿಕ್ ಎಬ್ಬಿಸುವುದು, ಮಂಗಳೂರಿನ ಹಲವೆಡೆ ಇಂತಹ ಘಟನೆ ನಡೆಯುತ್ತಿದೆ. ಸೋದರರೇ ನಿಮ್ಮನ್ನು ನಂಬಿರುವ ಕುಟುಂಬಗಳಿವೆ. ನಾಳೆ ನೀವು ಕೇಸ್ ಹಾಕಿಸಿಕೊಂಡು ಜೈಲಿಗೆ ಹೋದಲ್ಲಿ ನಿಮ್ಮ ಕುಟುಂಬದವರನ್ನು ನೋಡಲು ಯಾರೂ ಇರೋದಿಲ್ಲ. ಸ್ವಲ್ಪ ತಾಳ್ಮೆ ವಿನಯತೆಯಿಂದ ನಿಮ್ಮ ಕೆಲಸವನ್ನು ಶಿಸ್ತು ಬದ್ಧವಾಗಿ ಮಾಡಿ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article