ಬೆಳ್ತಂಗಡಿ: ಪುದುವೆಟ್ಟು ಅರಣ್ಯದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಮೃತದೇಹ ಪತ್ತೆ


ಬೆಳ್ತಂಗಡಿ: ಇಲ್ಲಿನ ಪುದುವೆಟ್ಟು‌ ಗ್ರಾಮದ ಬೋಳ್ಮಿನಾರು ಅರಣ್ಯ ಪರಿಸರದಲ್ಲಿ ಅಸ್ಥಿಪಂಜರ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಹಾಗೂ ಇತರ ಸೊತ್ತುಗಳು ದೊರೆತಿದೆ.

ಇದರ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು ಕಳೆಂಜ ಗ್ರಾಮದ ಕಾಯರ್ತಡ್ಕದ ರಾಜು ಜೋಸೆಫ್ ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಅರಣ್ಯ ಪ್ರದೇಶದಿಂದ ಸೊಪ್ಪು ತರಲು ತೆರಳಿದ್ದ ಸ್ಥಳೀಯರಿಗೆ ರಸ್ತೆಯಿಂದ ಸುಮಾರು 100 ಮೀ. ದೂರದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಈ ಬಗ್ಗೆ ಅವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದರು.ಸ್ಥಳದಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ದೊರಕಿರುವ ದಾಖಲೆಗಳ ಪ್ರಕಾರ ರಾಜು ಜೋಸೆಫ್ ಅವರ ಮನೆಯವರನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಇದು ಅವರದ್ದೇ ಮೃತದೇಹ ಎಂದು ಮನೆಯವರು ಸ್ಪಷ್ಟಪಡಿಸಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆಯೇ ಮನೆ ಬಿಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.