ತುಮಕೂರು: ಸುಟ್ಟುಹೋದ ಕಾರಿನಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆ
Friday, March 22, 2024
ತುಮಕೂರು: ತಾಲೂಕಿನ ಕೋರ ಹೋಬಳಿಯ ಕುಚ್ಚಂಗಿ ಕೆರೆಯ ಬಳಿ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.
ಸುಟ್ಟು ಹೋಗಿರುವ ಕಾರಿನ ನಂಬರ್ ಪ್ಲೇಟ್ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಇದರನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ. ಕಾರು ಬೆಳ್ತಂಗಡಿ ಮೂಲದ ರಫೀಕ್ ಎಂಬವರಿಗೆ ಸೇರಿದ್ದು ಎನ್ನುವ ಮಾಹಿತಿಯಿದೆ. ಕಾರಿನಲ್ಲಿದ್ದ ಮೃತದೇಹ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ (45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್ (56) ಮತ್ತು ಶಿರ್ಲಾಲು ನಿವಾಸಿ ಇಮ್ಮಿಯಾಜ್ (34) ಎಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರು ತುಮಕೂರಿಗೆ ಬಂದಿದ್ದು ಮೂವರ ಮೃತದೇಹಗಳೂ ಗುರುತು ಸಿಗದಷ್ಟು ಸುಟ್ಟು ಹೋಗಿದೆ.
ಕಾರಿನಲ್ಲಿ ಒಟ್ಟು ಐವರು ಬೆಳ್ತಂಗಡಿಯಿಂದ ತೆರಳಿದ್ದರು ಎನ್ನಲಾಗುತ್ತಿದ್ದು ಇನ್ನಿಬ್ಬರು ಎಲ್ಲಿದ್ದಾರೆ ಎನ್ನುವ ಮಾಹಿತಿ ಲಭಿಸಿಲ್ಲ. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿದ್ದಾರೆ. ಶ್ವಾನದಳ, ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.