ಪಣಂಬೂರು ಬೀಚ್ ನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನಾಪತ್ತೆ

ಮಂಗಳೂರು: ಪಣಂಬೂರು ಕಡಲ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ  ನಾಪತ್ತೆಯಾಗಿರುವ ಘಟನೆ ರವಿವಾರ ಸಂಜೆ ನಡೆದಿದೆ.
 
ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18), ಬೈಕಂಪಾಡಿಯ ಎಂಎಂಆರ್‌ ಕಂಪೆನಿಯಲ್ಲಿ ಮೇಲ್ವಿಚಾರಕರಾಗಿದ್ದ ನಾಗರಾಜ್ (24) ಹಾಗೂ ಮೀಶೋ ಕಂಪೆನಿಯ ಡೆಲಿವರಿ ಬಾಯ್ ಆಗಿದ್ದ ಮಿಲನ್ (20) ನಾಪತ್ತೆಯಾದ ಯುವಕರು.

ಈ ಮೂವರು ಯುವಕರು ರವಿವಾರ ಸಂಜೆ 6 ಗಂಟೆ ಸುಮಾರಿಗೆ ಪಣಂಬೂರು ಬೀಚ್ ನಲ್ಲಿ  ಅಲೆಗಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಬೃಹತ್‌ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಗೆ ಸಂಬಂಧಿಸಿ ಈವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿದೆ. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.