ತುಮಕೂರು:  ಕಾಮಿಡಿಯನ್ ತುಕಾಲಿ ಸಂತೋಷ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಜಗದೀಶ್ (44) ಮೃತ ದುರ್ದೈವಿ. ಈತ ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯದ ನಿವಾಸಿ.
ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ರಾತ್ರಿ ಹೊನ್ನೆನಹಳ್ಳಿ ಬಳಿ ತುಕಾಲಿ ಸಂತೋಷ್ ಕಾರು ಹಾಗೂ ಆಟೋ ನಡುವೆ ಅಪಘಾತ ನಡೆದಿತ್ತು. ಜಗದೀಶ್ ಗೆ ಗಾಯವಾಗಿತ್ತು. ಕೂಡಲೇ ಆತನನ್ನು ಕುಣಿಗಲ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು (ಮಾ.14) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಮೃತಪಟ್ಟಿದ್ದಾರೆ .
ತುಕಾಲಿ ಸಂತೋಷ್ ಅವರು ಕೆಲ ವಾರಗಳ ಹಿಂದಷ್ಟೇ ಹೊಸ ಕಿಯಾ ಸೆಲ್ಟೊಸ್ ಕಾರನ್ನು ಖರೀದಿ ಮಾಡಿದ್ದರು. ಹೊಸ ಕಾರು ಮನೆಗೆ ಬಂದು ಎರಡು ವಾರ ಕಳೆಯುವಷ್ಟರಲ್ಲೇ ಅಪಘಾತ ಸಂಭವಿಸಿದೆ. ಕುಣಿಗಲ್ ಮಾರ್ಗವಾಗಿ ತುಕಾಲಿ ಸಂತೋಷ್ ದಂಪತಿ ಹಾಸನ ಜಿಲ್ಲೆ ಹೊಳೆನರಸೀಪುರದತ್ತ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕುಣಿಗಲ್ ಕಡೆಯಿಂದ ಕುರುಡಿಹಳ್ಳಿಗೆ ಬರುತ್ತಿದ್ದ ಆಟೋ, ತುಕಾಲಿ ಸಂತೋಷ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
 
 
 
 
 
 
 
 
 
 
 
 
 
 
 
 
