-->
ಬಜಪೆ: ಬಾವಿಗೆ ಬಿತ್ತು ಅಪರೂಪದ ಕರಿಚಿರತೆ - ಹರಸಾಹಸಪಟ್ಟು ಬೋನಿಗೆ ಕೆಡವಿದ ಅರಣ್ಯ ಇಲಾಖೆ ಅಧಿಕಾರಿಗಳು

ಬಜಪೆ: ಬಾವಿಗೆ ಬಿತ್ತು ಅಪರೂಪದ ಕರಿಚಿರತೆ - ಹರಸಾಹಸಪಟ್ಟು ಬೋನಿಗೆ ಕೆಡವಿದ ಅರಣ್ಯ ಇಲಾಖೆ ಅಧಿಕಾರಿಗಳು



ಬಜಪೆ: ನಗರದ ಎಡಪದವು ಬಳಿಯ ಗೊಸ್ಪೆಲ್ ಸನಿಲ ಎಂಬಲ್ಲಿನ ಶಕುಂತಳ ಆಚಾರ್ಯ ಅವರ ಮನೆಯ ಬಾವಿಗೆ ಅಪರೂಪದ ಕರಿಚಿರತೆಯೊಂದು ಬಿದ್ದಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಹರಸಾಹಪಟ್ಟು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಚಿರತೆ ಆಹಾರ ಅರಸಿ ಬಂದು ಶನಿವಾರ ರಾತ್ರಿ ವೇಳೆ ಶಕುಂತಳ ಆಚಾರ್ಯರ ಮನೆಯ ಬಾವಿಗೆ ಬಿದ್ದಿರಬಹುದು‌. ರವಿವಾರ ಬೆಳಗ್ಗೆ ಮನೆಯವರು ಬಾವಿಯಿಂದ ನೀರು ಸೇದಲೆಂದು ಹೋದಾಗ ಅಪರೂಪದ ಚಿರತೆ ಬಿದ್ದಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕರಿಚಿರತೆಯನ್ನು ಮೇಲಕ್ಕೆತ್ತಲು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯಾಹ್ನದ ವೇಳೆಗೆ ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಗಾಗಿ ಬಾವಿಯ ಸುತ್ತ ಬಲೆ ಹಾಕಲಾಗಿದ್ದು, ಏಣಿ ಇಳಿಸಿ ಬಾವಿಯ ದಂಡೆಯ ಸಮೀಪ ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇಡಲಾಗಿತ್ತು. ಬಳಿಕ ಚಾಕಚಕ್ಯತೆಯಿಂದ ಈ ಕರಿಚಿರತೆಯನ್ನು ಬೋನಿಗೆ ಕೆಡವಿ ಹಾಕಲು ಯಶಸ್ವಿಯಾಗಿದ್ದಾರೆ.

ಎಡಪದವು ಪರಿಸರದ ಬೋರುಗುಡ್ಡೆ ಎಂಬಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಉಪಟಳದಿಂದ ಜನ ಕಂಗೆಟ್ಟಿದ್ದು, ಹಲವು ಮನೆಗಳ ಸಾಕು ನಾಯಿಗಳು ಹಾಗೂ ದನಗಳು ಚಿರತೆಗೆ ಆಹಾರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಗೆ ಚಿರತೆ ಬಿದ್ದಿರುವುದು ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
 
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾ‌ರ್, ಸಹಾಯಕ ವಲಯ ಅರಣ್ಯಾಧಿಕಾರಿ ಜಗರಾಜ್, ಅರಣ್ಯ ಪಾಲಕರಾದ ದಿನೇಶ್, ಕ್ಯಾತಲಿಂಗ, ಚಾಲಕ ಸೂರಜ್ ಸ್ಥಳೀಯರಾದ ಹರೀಶ್, ಗಣೇಶ್ ಹಾಗೂ ಬಜಪೆ ಪೊಲೀಸರು ಸಹಕರಿಸಿದ್ದರು.

Ads on article

Advertise in articles 1

advertising articles 2

Advertise under the article