ವೆಡ್ಡಿಂಗ್ ಆ್ಯನಿವರ್ಸರಿಗೆ ಗಿಫ್ಟ್ ಕೊಡಲಿಲ್ಲವೆಂದು ಪತಿಗೆ ಚಾಕುವಿನಿಂದ ಇರಿದ ಪತ್ನಿ
ಬೆಂಗಳೂರು: ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆ ಕೊಡಲಿಲ್ಲವೆಂದು ಪತ್ನಿಯೇ ಪತಿಗೆ ಚಾಕುವಿನಿಂದ ಇರಿದು ಹತ್ಯೆಗೆತ್ನಿಸಿರುವ ಘಟನೆ ಬೆಂಗಳೂರು ನಗರದ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಫೆ. 27ರ ತಡರಾತ್ರಿ 1:30ರ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿದ್ದ ಪತಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿರುವುದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ರಾತ್ರಿ 1.30ರ ಸುಮಾರಿಗೆ 35 ವರ್ಷದ ಪತ್ನಿ, ಚಾಕು ತೆಗೆದುಕೊಂಡು 37ವರ್ಷದ ಪತಿಗೆ ಇರಿದಿದ್ದಾಳೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಈತನಿಗೆ ರಾತ್ರಿ ಮಲಗಿದ್ದ ವೇಳೆ ಪತ್ನಿ ಈ ಕೃತ್ಯ ಎಸಗಿದ್ದಾಳೆ. ತಕ್ಷಣ ನಿದ್ದೆಯಿಂದ ಎಚ್ಚೆತ್ತ ವ್ಯಕ್ತಿ, ಪತ್ನಿಯನ್ನು ದೂರ ತಳ್ಳಿದ ಕಾರಣ ಹೆಚ್ಚಿನ ಅಪಾಯ ತಪ್ಪಿದ್ದಾಗಿ ತಿಳಿಸಿದ್ದಾನೆ.
ಈ ವೇಳೆ ಆತನ ಕಿರುಚಾಟ ಕೇಳಿ ಅವರ ಮನೆಗೆ ದೌಡಾಯಿಸಿದ ಸ್ಥಳೀಯರು ಗಾಯಾಳು ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿ ದೇಹದಲ್ಲಿ ಚಾಕು ಇರಿತದ ಗಾಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ತಂಡ ಪೊಲೀಸರಿಗೆ ಮಾಹಿತಿ ನೀಡಿದೆ. ಪತಿಗೆ ಚಾಕುವಿನಿಂದ ಇರಿದ ಪತ್ನಿಯ ವಿರುದ್ಧ ಮಾರ್ಚ್ 1ರಂದು ದೂರು ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.