ಉಡುಪಿ: ತಾಲೂಕಿನ ಉದ್ಯಾವರದ ಹಲೀಮಾ ಸಾಬ್ಬು ಆಡಿಟೋರಿಯಂ ಮುಂಭಾಗ ನಿಂತಿದ್ದ ಬೊಲೆರೋ ವಾಹನಕ್ಕೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪುತ್ರ ಮೃತಪಟ್ಟು ತಾಯಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಉಚ್ಚಿಲ ಪೊಲ್ಯ ನಿವಾಸಿ ಅಝೀಜ್ ಎಂಬವರ ಪುತ್ರ ಮುಫ್ರೀನ್ (18) ಮೃತಪಟ್ಟ ಯುವಕ. ಆತನ ತಾಯಿ ಹಾಜಿರಾ ಭಾನು ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಜಮಾಡಿಯಿಂದ ಮುಫ್ರೀನ್ ತನ್ನ ತಾಯಿಯನ್ನು ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದ್ವಿಚಕ್ರ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದನು. ಈ ವೇಳೆ ಇವರಿದ್ದ ದ್ವಿಚಕ್ರ ವಾಹನ ಉದ್ಯಾವರದ ಹಲೀಮಾ ಸಾಬ್ಬು ಆಡಿಟೋರಿಯಂ ಮುಂಭಾಗ ನಿಲ್ಲಿಸಲಾಗಿದ್ದ ಬೊಲೆರೋ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮುಫ್ರೀನ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಆತನ ತಾಯಿ ಹಾಜಿರಾ ಭಾನು ಗಂಭೀರ ಗಾಯಗೊಂಡಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.