ಅತ್ಯಾಚಾರಿಯನ್ನು ಬಂಧಿಸುವಂತೆ ವಾಟರ್ ಟ್ಯಾಂಕ್ ಮೇಲೇರಿ ಕಣ್ಣೀರಿಟ್ಟ ಸಂತ್ರಸ್ತೆ


ರಾಜಸ್ಥಾನ: ಅತ್ಯಾಚಾರ ಎಸಗಿ ಒಂದು ತಿಂಗಳಾದರೂ ಆರೋಪಿಯ ಬಂಧನವಾಗಿಲ್ಲವೆಂದು ತೀವ್ರ ಮನನೊಂದ ಸಂತ್ರಸ್ತೆ ವಾಟರ್ ಟ್ಯಾಂಕ್ ಮೇಲೇರಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಕಣ್ಣೀರಿಟ್ಟ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವರದಿಯಾಗಿದೆ.

ಸಂತ್ರಸ್ತೆ ತನ್ನ ದೂರನ್ನು ಅಧಿಕಾರಿಗಳು ಗಮನಿಸುವಂತೆ ಆಗ್ರಹಿಸಿ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ನೀರಿನ ಟ್ಯಾಂಕ್ ಮೇಲೆ ಏರಿ ಮನವಿ ಮಾಡಿದ್ದಾರೆ. ಘಟನೆ ನಡೆದು ಒಂದು ತಿಂಗಳಾದರೂ ಅತ್ಯಾಚಾರಿ ಆರೋಪಿಯನ್ನು ಪೊಲೀಸರು ಏಕೆ ಇನ್ನೂ ಬಂಧಿಸಿಲ್ಲ? ತಕ್ಷಣ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಮಹಿಳೆಯ ಪ್ರಕಾರ ಆರೋಪಿಯ ವಿರುದ್ಧ ತಿಂಗಳ ಹಿಂದೆಯೇ ದೂರು ನೀಡಿದ್ದರು. ಆಕೆಯ ದೂರಿನನ್ವಯ, ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್‌ಗೆ ತನ್ನ ಹೇಳಿಕೆಯನ್ನು ಸಹ ದಾಖಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ನೀರಿನ ಟ್ಯಾಂಕ್ ಏರಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ಕೆಳಗಿಳಿಯುವಂತೆ ಮನವೊಲಿಸಿದರು. ಪೊಲೀಸರ ಸತತ ಪ್ರಯತ್ನಗಳ ಬಳಿಕ ಅವರು ಕೊಟ್ಟ ಭರವಸೆಯ ಮೇರೆಗೆ ಮಹಿಳೆ ಕೆಳಗಿಳಿದಿದ್ದಾರೆ.