-->

ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ  ಮತ್ತೊಂದು ಗೌರವ- ಬರಲಿದೆ ಯಕ್ಷಗಾನದ ಅಂಚೆ ಚೀಟಿ!

ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಮತ್ತೊಂದು ಗೌರವ- ಬರಲಿದೆ ಯಕ್ಷಗಾನದ ಅಂಚೆ ಚೀಟಿ!

ಮಂಗಳೂರು: ಜಾನಪದಕಲೆಯಲ್ಲಿ ತನ್ನದೇ ಆದ  ವಿಶಿಷ್ಟ ಮತ್ತು  ಸಾಂಪ್ರದಾಯಿಕ ಪ್ರದರ್ಶನ ಕಲೆಯಾಗಿರುವ ಯಕ್ಷಗಾನ ಕಲೆಗೆ ಅಂಚೆ ಚೀಟಿ ಬಿಡುಗಡೆ ಮೂಲಕ ರಾಷ್ಟ್ರೀಯ ಮಟ್ಟದ ಗೌರವ ಸಿಕ್ಕಿದೆ.

 ಸಾಮಾನ್ಯವಾಗಿ ರಾಜ್ಯ, ರಾಷ್ಟ್ರಮಟ್ಟದ ಸಾಧಕರು, ವಿಭಿನ್ನ ಕಲೆಗಳನ್ನು ಗುರುತಿಸಿ ಅಂಚೆ ಇಲಾಖೆ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದೆ. ಭಾರತೀಯ ಕಲೆಗಳಾದ ಕೂಚಿಪುಡಿ, ಭರತನಾಟ್ಯ ಸೇರಿದಂತೆ ಹಲವು ಕಲೆಗಳ ಅಂಚೆ ಚೀಟಿ ಈ ಹಿಂದೆಯೇ ಬಿಡುಗಡೆಯಾಗಿತ್ತು. ಆದರೆ ಕರಾವಳಿ ಕರ್ನಾಟಕದ ಕಲೆಯೊಂದು ಅಂಚೆ ಚೀಟಿಯಲ್ಲಿ ಬಿಡುಗಡೆಯಾಗುವುದು ಇದೇ ಮೊದಲು.
2017ರಲ್ಲಿ ಯಕ್ಷಗಾನ ಕವಿ ನಂದಳಿಕೆ ಮುದ್ದಣನ ಅಂಚೆ ಚೀಟಿ, 2023ರ ಡಿಸೆಂಬರ್ನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ವನಿತೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರಿನ ಅಂಚೆ ಚೀಟಿಯೂ ಬಿಡುಗಡೆಗೊಂಡಿದೆ. ಯಕ್ಷಗಾನ ಮೇರು ಕಲಾವಿದರಾದ ಕರಾವಳಿ ಮೂಲದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರ ಕುರಿತ ಅಂಚೆ ಚೀಟಿಗಳು ಹೊರಬಂದಿವೆ. ಆದರೆ ಯಕ್ಷಗಾನವೇ ವಿಷಯಾಧಾರಿತವಾಗಿ ಅಂಚೆ ಚೀಟಿ ಇದುವರೆಗೆ ಬಂದಿರಲಿಲ್ಲ.

ಸಂಸದರ ನಿರಂತರ ಪ್ರಯತ್ನ: ಯಕ್ಷಗಾನಕ್ಕೆ ರಾಷ್ಟ್ರೀಯ ಮನ್ನಣೆ ಸಿಗುವ ಉದ್ದೇಶದಿಂದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು 5 ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರು. ಈ ಹಿಂದೆ ವಿಶೇಷ ಅಂಚೆ ಯಕ್ಷಗಾನದ ಚೀಟಿಗಳನ್ನು ಅಂಚೆ ಇಲಾಖೆಯೇ ತನ್ನದೇ ಅನುದಾನದಲ್ಲಿ ಬಿಡುಗಡೆ ಮಾಡಿತ್ತು.

ಮೂರು ವಿಧದ ಅಂಚೆ ಚೀಟಿ: ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಅಂಚೆ ಇಲಾಖೆಯಲ್ಲಿ ಡೆಫಿನೆಟಿವ್, ಮೈ ಸ್ಟ್ಯಾಂಪ್, ಕಮ್ಮೆಮೊರೇಟಿವ್ ಸ್ಟ್ಯಾಂಪ್ ಎಂಬ ಮೂರು ವಿಧದಲ್ಲಿ ಸ್ಟ್ಯಾಂಪ್ ಬಿಡುಗಡೆ ಮಾಡುತ್ತದೆ. ಡೆಫಿನೆಟಿವ್ ಅಂದರೆ ಅಂಚೆ ಇಲಾಖೆಯ ಮಾಮೂಲು ಸ್ಟ್ಯಾಂಪ್, ವ್ಯಕ್ತಿಗತ ಅಂಚೆ ಚೀಟಿ ಬೇಕಾದರೆ 300ರೂ. ಕೊಟ್ಟು ವೈಯಕ್ತಿಕ ಚಿತ್ರವುಳ್ಳ 12 ಸ್ಟ್ಯಾಂಪ್ ಪಡೆದುಕೊಳ್ಳಬಹುದು. ಕಮ್ಮೊರೇಟಿವ್ ಸ್ಟಾಂಪ್ ಗಳನ್ನು ಮುದ್ರಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಬೇಕು. ಅಲ್ಲದೆ ವಿನ್ಯಾಸಕ್ಕೂ ಅಂಚೆ ಇಲಾಖೆ ಒಪ್ಪಿಗೆ ಸೂಚಿಸಬೇಕು. ಒಂದು ಬಾರಿ ಮಾತ್ರ ಈ ವಿಶೇಷ ಅಂಚೆ ಚೀಟಿ ಮುದ್ರಣಗೊಳಿಸಬಹುದಾಗಿದೆ.
 5ರೂ. ಬೆಲೆಯ 5 ಲಕ್ಷ ಅಂಚೆ ಚೀಟಿ: ಕೇಂದ್ರ ಸರಕಾರ ಸ್ವಾಮ್ಯದ ಎಂಆರ್ ಪಿಎಲ್ ಅಂಚೆ ಚೀಟಿ ಪ್ರಾಯೋಜಕತ್ವವನ್ನು ವಹಿಸಿದ್ದು, 5.30ಲಕ್ಷ ರೂ. ಮೊತ್ತವನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. ಈ ಮೊತ್ತದಲ್ಲಿ ಸುಮಾರು 5 ಲಕ್ಷದಷ್ಟು ಯಕ್ಷಗಾನ ಥೀಮ್‌ ಅಂಚೆ ಚೀಟಿ ಮುದ್ರಣಗೊಂಡು ಹೊರಬರಲಿದೆ. ಪ್ರತಿ ಅಂಚೆ ಚೀಟಿ 5 ರೂ. ಮುಖ ಬೆಲೆಯನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article