ಅಶ್ಲೀಲ ವೀಡಿಯೋ ನೋಡುತ್ತಿದ್ದ, ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುತ್ರನನ್ನೇ ಕೊಂದ ತಂದೆ
Friday, February 2, 2024
ಹೊಸದಿಲ್ಲಿ: ಅಶ್ಲೀಲ ವೀಡಿಯೊಗಳನ್ನು ನೋಡುತ್ತಿದ್ದ ಹಾಗೂ ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುತ್ರನ ವರ್ತನೆಯಿಂದ ಬೇಸತ್ತ ತಂದೆ, ಆತನಿಗೆ ಪಾನೀಯದಲ್ಲಿ ವಿಷಬೆರೆಸಿ ನೀಡಿ ಕೊಂದಿರುವ ಪ್ರಕರಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜ.13ರಂದು ವಿಶಾಲ್ ಎಂಬ ಯುವಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಇದಾದ ಬಳಿಕ ಸ್ವಲ್ಪದರಲ್ಲೇ ಯುವಕನ ಮೃತದೇಹ ಪತ್ತೆಯಾಗಿದೆ. ಈ ಮೃತದೇಹ ನಾಪತ್ತೆಯಾಗಿದ್ದ ವಿಶಾಲ್ ನದ್ದು ಎನ್ನುವುದನ್ನು ಕುಟುಂಬ ದೃಢಪಡಿಸಿತ್ತು. ತಪಾಸಣೆಯಿಂದ ಈ ಸಾವು ವಿಷಪ್ರಾಶನದಿಂದ ಸಂಭವಿಸಿದೆ ಎನ್ನುವುದು ತಿಳಿದು ಬಂತು.
ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಅವರ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಕೊನೆಗೆ ಪೊಲೀಸರು ತಂದೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೂಲಂಕಷವಾಗಿ ವಿಚಾರಿಸಿದ್ದಾರೆ. ಈ ವೇಳೆ ತಮ್ಮ ದುಃಖವನ್ನು ಹಂಚಿಕೊಂಡ ತಂದೆ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.
"ಪುತ್ರ ವಿಶಾಲ್ ಚೆನ್ನಾಗಿ ಓದುತ್ತಿರಲಿಲ್ಲ. ಶಾಲೆಯಲ್ಲಿ ಹುಡುಗಿಯರನ್ನು ಕೀಟಲೆ ಮಾಡುತ್ತಿದ್ದ. ಅಲ್ಲದೆ ತಮ್ಮ ಫೋನ್ ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುತ್ತಿದ್ದ. ಈ ಬಗ್ಗೆ ಬುದ್ಧಿವಾದ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಾಲೆಯಿಂದಲೂ ದೂರುಗಳು ಬರುತ್ತಿದ್ದವು. ಇದರಿಂದ ಹತಾಶೆ ಹೊಂದಿ ಪುತ್ರನನ್ನು ಸಾಯಿಸಿದ್ದಾಗಿ ತಂದೆ ಹೇಳಿದ್ದಾರೆ" ಎಂದು ಪೊಲೀಸರು ವಿವರಿಸಿದ್ದಾರೆ.
ಪುತ್ರನ ವರ್ತನೆಯಿಂದ ಬೇಸತ್ತ ತಂದೆ ವಿಜಯ್ ಬಟ್ಟು ಜನವರಿ 13ರಂದು ದ್ವಿಚಕ್ರವಾಹನದಲ್ಲಿ ಆತನನ್ನು ತುಳಜಾಪುರ ರಸ್ತೆಗೆ ಕರೆದೊಯ್ದಿದ್ದಾರೆ. ಅಲ್ಲಿ ವಿಷಬೆರೆಸಿದ ತಂಪು ಪಾನೀಯವನ್ನು ಪುತ್ರನಿಗೆ ಕುಡಿಯಲು ನೀಡಿದ್ದಾರೆ. ಈ ತಂಪು ಪಾನೀಯ ಕುಡಿದ ತಕ್ಷಣ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆದ್ದರಿಂದ ಆತನನ್ನು ಅಲ್ಲೇ ಬಿಟ್ಟು ಮನೆಗೆ ಬಂದಿದ್ದಾರೆ. ಇದೀಗ ಪುತ್ರನನ್ನೇ ಕೊಂದ ವಿಜಯ ಬಟ್ಟುವನ್ನು ಪೊಲೀಸರು ಬಂಧಿಸಿದ್ದಾರೆ.