-->
ಸಿನಿಮಾ ನಿರ್ಮಾಣದಿಂದ ಬಂದ ಹಣದಿಂದ ತೃಪ್ತನಾಗದೆ ಮಾದಕದ್ರವ್ಯ ಮಾರಾಟಕ್ಕಿಳಿದ ಸಿನಿಮಾ ನಿರ್ಮಾಪಕ

ಸಿನಿಮಾ ನಿರ್ಮಾಣದಿಂದ ಬಂದ ಹಣದಿಂದ ತೃಪ್ತನಾಗದೆ ಮಾದಕದ್ರವ್ಯ ಮಾರಾಟಕ್ಕಿಳಿದ ಸಿನಿಮಾ ನಿರ್ಮಾಪಕ


ಹೊಸದಿಲ್ಲಿ: ಸಿನಿಮಾ ನಿರ್ಮಾಣದಲ್ಲಿ ದೊರೆಯುತ್ತಿದ್ದ ಸಂಪಾದನೆಯಿಂದ ತೃಪ್ತನಾಗದ ತಮಿಳು ಸಿನಿಮಾ ನಿರ್ಮಾಪಕನೊಬ್ಬ ಮಾದಕದ್ರವ್ಯ ಮಾರಾಟ ಜಾಲದಲ್ಲಿ ಭಾಗಿಯಾಗಿ ಕೇವಲ ಮೂರು ವರ್ಷಗಳಲ್ಲಿ 2,000 ಕೋಟಿ ರೂ. ಸಂಪಾದಿಸಿದ್ದಾನೆ.

ಕೊಬ್ಬರಿ ಪುಡಿ ಅಥವಾ ಆರೋಗ್ಯ ಮಿಶ್ರಣಗಳಲ್ಲಿ ಮೆಥಾಂಫೆಟೈಮ್ ತಯಾರಿಸಲು ಬಳಸಲಾಗುವ ಪ್ರಮುಖ ರಾಸಾಯನಿಕ ಸ್ಕೂಡೊಎಫಿಡ್ರಿನ್ ಅನ್ನು ದೊಡ್ಡ ಪ್ರಮಾಣದಲ್ಲಿ ಬೆರೆಸಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ನ್ಯೂಝಿಲೆಂಡ್ ನ ಸುಂಕ ಪ್ರಾಧಿಕಾರಗಳು ಹಾಗೂ ಆಸ್ಟ್ರೇಲಿಯಾ ಪೊಲೀಸರಿಂದ ಮಾಹಿತಿ ಸ್ವೀಕರಿಸಿದ್ದೇವೆ ಎಂದು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

"ಅಮೆರಿಕಾ ಮಾದಕ ದ್ರವ್ಯ ಜಾರಿ ಆಡಳಿತದ ಮಾಹಿತಿಯ ಪ್ರಕಾರ, ಈ ಸರಕುಗಳು ದಿಲ್ಲಿಯಿಂದ ಸಾಗಾಟವಾಗಿದೆ ಎಂದು ತಿಳಿದು ಬಂದಿತು. ನಂತರ ದಿಲ್ಲಿ ವಿಶೇಷ ಪೊಲೀಸ್‌ ಘಟಕ ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಜಂಟಿ ತಂಡವನ್ನು ರಚಿಸಲಾಯಿತು. ನಾಲ್ಕು ತಿಂಗಳ ತೀವ್ರ ಸ್ವರೂಪದ ತಾಂತ್ರಿಕ ಹಾಗೂ ನಿಗಾ ನಂತರ, ಈ ಕೆಲಸದಲ್ಲಿ ತೊಡಗಿರುವವರು ದಿಲ್ಲಿಯಲ್ಲೇ ಇದ್ದಾರೆ ಹಾಗೂ ಅವರು ಮತ್ತೊಂದು ಸರಕನ್ನು ಆಸ್ಟ್ರೇಲಿಯಾಗೆ ರವಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿತು" ಎಂದು ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳದ ಉಪ ಮಹಾ ನಿರ್ದೇಶಕ ಗ್ಯಾನೇಶ್ವರ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ನಿಗಾ ಇರಿಸಿದ್ದ ಅಧಿಕಾರಿಗಳು ಪಶ್ಚಿಮ ದಿಲ್ಲಿಯ ಬಸಾಯಿ ದಾರಾಪುರ್‌ನಲ್ಲಿರುವ ಗೋದಾಮಿನಂಥ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಬಹುಧಾನ್ಯ ಮಿಶ್ರಣದಲ್ಲಿ ನ್ಯೂಡೊಎಫಿಡ್ರಿನ್ ಅನ್ನು ತುಂಬಿಸಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ತಂಡವು ಬಲೆಗೆ ಬಿದ್ದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 50 ಕೆಜಿ ತೂಕದ ರಾಸಾಯನಿಕವನ್ನು ವಶಪಡಿಸಿಕೊಳ್ಳಲಾಗಿದೆ.

ಅಧಿಕಾರಿಗಳು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಈ ಜಾಲದ ಸೂತ್ರಧಾರ ತಮಿಳು ಚಿತ್ರ ನಿರ್ಮಾಪಕರೊಬ್ಬರು ಎಂಬ ಸಂಗತಿ ಬಯಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ತಮ್ಮ ದೇಶಗಳಲ್ಲಿ ಈ ಸರಕನ್ನು ಸ್ವೀಕರಿಸಿರುವವರನ್ನೂ ಬಂಧಿಸುವಂತೆ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರಾಧಿಕಾರಗಳಿಗೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳವು ಮನವಿ ಮಾಡಿದೆ.

Ads on article

Advertise in articles 1

advertising articles 2

Advertise under the article