ಬೆಳ್ತಂಗಡಿ: ಡ್ರಾಯಿಂಗ್ ಶಿಕ್ಷಕನಿಂದ ಬಂದ ಅವಹೇಳಕಾರಿ ಸಂದೇಶದಿಂದ ಮನನೊಂದ ಎಸ್ಎಸ್ಎಲ್ ಸಿ ಇಲಿಪಾಷಾಣ ಸೇವಿಸಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.12ರಂದು ಮೃತಪಟ್ಟಿದ್ದಾಳೆ. ಧರ್ಮಸ್ಥಳದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿಯ ಬಗ್ಗೆ ಮತ್ತೋರ್ವ ವಿದ್ಯಾರ್ಥಿನಿಗೆ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಅವಮಾನಕಾರಿ ಸಂದೇಶ ಕಳುಹಿಸಿದ್ದ. ಇದನ್ನು ಆಕೆ ಈ ವಿದ್ಯಾರ್ಥಿನಿಗೆ ತಿಳಿಸಿದ್ದಾಳೆ.
ಪರಿಣಾಮ ಮನನೊಂದ ವಿದ್ಯಾರ್ಥಿನಿ ಫೆ.7ರಂದು ಇಲಿ ಪಾಷಣ ಪೇಸ್ಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 5.30ಗೆ ಮೃತಪಟ್ಟಿದ್ದಾಳೆ. ಇದೀಗ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿಯನ್ನು ಬಂಧಿಸಿದ ಧರ್ಮಸ್ಥಳ ಠಾಣಾ ಪೊಲೀಸರು ಪೊಕ್ಸೊ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ.