ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ


ಮಂಗಳೂರು: ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ. ಮೋದಿಯವರು ಇದುವರೆಗೂ ಹೇಳಿದ್ದರಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ? ಜನರ ಬದುಕಿಗೆ ನೆರವಾಗುವ, ದೇಶದ ಮಕ್ಕಳು ಯುವಜನರ ಬದುಕು ಭವಿಷ್ಯಕ್ಕೆ ಅನುಕೂಲವಾಗುವ ಒಂದೇ ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. 

2013-18 ರವರೆಗೂ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಶೇ98 ರಷ್ಟನ್ನು ಈಡೇರಿಸಿದ್ದೆವು. ಈ ಬಾರಿ ಚುನಾವಣೆ ವೇಳೆ 5 ಗ್ಯಾರಂಟಿಗಳನ್ನು ನೀಡಿದ್ದೆವು. ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನೂ ಕೇವಲ 8 ತಿಂಗಳಲ್ಲಿ ಜಾರಿಗೊಳಿಸಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಕೊಟ್ಟಿದ್ದೇವೆ. ನಾವು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದೆವು. 

ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿಬಿಡುತ್ತದೆ ಎಂದಿದ್ದ ಮೋದಿಯವರೇ ಈಗ ನಮ್ಮ ಗ್ಯಾರಂಟಿಯನ್ನು ಕದ್ದು ಈಗ "ಮೋದಿ ಗ್ಯಾರಂಟಿ-ಮೋದಿ ಗ್ಯಾರಂಟಿ" ಎಂದು ಹೇಳಲಾರಂಭಿಸಿದ್ದಾರೆ.‌ ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ, ಜಗಳ ತಂದಿಟ್ಟಿರುವುದು ಬಿಟ್ಟರೆ ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ಒಂದೇ ಒಂದು ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ಜಾರಿ ಆಗಿದೆಯಾ? ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಆಯ್ತಾ? ಅಡುಗೆ ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ? ಕಪ್ಪು ಹಣ ವಾಪಾಸ್ ಬಂದಿದೆಯಾ? ಅಚ್ಛೆ ದಿನ್ ಯಾರಿಗಾದರೂ ಬಂದಿದೆಯಾ?  ಹೇಳಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕೇಳಿದರು. ಜನರು ಇಲ್ಲ, ಇಲ್ಲ, ಏನಿಲ್ಲ ಎಂದು ಕೂಗಿದರು. ಎಂದು ಸಿಎಂ ವ್ಯಂಗ್ಯವಾಡಿದರು.