ಶೀಘ್ರದಲ್ಲೇ ಜುಕರ್‌ಬರ್ಗ್ ಸಾವಿನತ್ತ ಪ್ರಯಾಣ ಬೆಳೆಸಿದ್ದಾರೆ : ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಮೆಟಾ ಕಂಪೆನಿ
Tuesday, February 6, 2024
ಕ್ಯಾಲಿಫೋರ್ನಿಯಾ: ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಜೀವನಶೈಲಿ ಅವರನ್ನು ಆದಷ್ಟು ಬೇಗ ಸಾವಿನ ದವಡೆಗೆ ತಳ್ಳಲಿದೆ. ಕಂಪೆನಿಯ ಏಳಿಗೆಗೂ ಅದರಿಂದ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಸ್ವತಃ ಮೆಟಾ ಕಂಪನಿಯೇ ತನ್ನ ಇತ್ತೀಚಿನ ಆರ್ಥಿಕ ವರದಿಯಲ್ಲಿ ತಿಳಿಸಿದೆ.
ಮಿಶ್ರ ಸಮರ ಕಲೆಗಳು, ವಿಪರೀತ ಕ್ರೀಡೆಗಳು ಹಾಗೂ ವೈಮಾನಿಕ ಚಟುವಟಿಕೆಗಳಲ್ಲಿ ಜುಕರ್‌ಬರ್ಗ್ ತೊಡಗಿಸಿಕೊಂಡಿದ್ದಾರೆ. ಇದು ಮೆಟಾ ಮತ್ತು ಅದರ ಹೂಡಿಕೆದಾರರಿಗೆ ಸಂದಿಗ್ಧತೆಯನ್ನು ಉಂಟುಮಾಡುವ ಗಂಭೀರ ಅಪಾಯಗಳನ್ನು ತಂದೊಡ್ಡಿದೆ ಎಂದು ವರದಿಯು ಹೈಲೈಟ್ ಮಾಡಿದೆ. ಯಾವುದೇ ಕಾರಣಕ್ಕಾಗಿ ಜುಕರ್‌ಬರ್ಗ್‌ನ ಅಲಭ್ಯತೆಯು ಕಂಪೆನಿಯ ಕಾರ್ಯಾಚರಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ಮೆಟಾ ಒತ್ತಿಹೇಳಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಸಂದರ್ಭ ಗಾಯಗೊಂಡ ಜುಕರ್‌ಬರ್ಗ್, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕದಿಂದ ಈ ಆತಂಕ ಉಂಟಾಗಿದೆ. ಕಂಪೆನಿಯ ಆತಂಕಗಳಿಗೆ ಪ್ರತಿಕ್ರಿಯೆ ನೀಡಿದ ಜುಕರ್‌ಬರ್ಗ್ ಅವರು, ದೊಡ್ಡ ಅಪಾಯಗಳು ದೊಡ್ಡ ಪ್ರತಿಫಲಗಳಿಗೆ ಕಾರಣವಾಗುತ್ತವೆ ಎಂದು ಹೇಳುವ ಮೂಲಕ ತಮ್ಮ ಅಪಾಯದ ಅನ್ವೇಷಣೆಗಳನ್ನು ಸಮರ್ಥನೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಜುಕರ್‌ಬರ್ಗ್ ತಮ್ಮ ಗಮನವನ್ನು ತಂತ್ರಜ್ಞಾನದಿಂದ ಕೃಷಿಯತ್ತ ಬದಲಾಯಿಸಿದ್ದಾರೆ. ಜಾನುವಾರು ಸಾಕಣೆಗೆ ಮುಂದಾಗಿದ್ದಾರೆ. ಯುಎಸ್ಎ ಹವಾಯಿಯ ಕೊಯಿಲ್ ಕೊಲೌದಲ್ಲಿ ರ್ಯಾಂಚ್ ಅನ್ನು ನಿರ್ವಹಿಸುತ್ತಿರುವ ಜುಕರ್‌ಬರ್ಗ್ ವಿಶ್ವದ ಅತ್ಯುತ್ತಮ ಗೋಮಾಂಸವನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದಾರೆ. ಬಿಲಿಯನೇರ್ ತನ್ನ ಜಾನುವಾರುಗಳಿಗೆ ಸ್ಥಳೀಯವಾಗಿ ಆಹಾರವನ್ನು ನೀಡುತ್ತಿದ್ದಾರೆ. ಗೋವುಗಳಿಗೆ ಮಕಾಡಾಮಿಯಾ ಬೀಜಗಳು, ಒಣಗಿದ ಹಣ್ಣುಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ಬಿಯರ್ ಅನ್ನು ಆಹಾರವಾಗಿ ಒದಗಿಸುತ್ತಿದ್ದಾರೆ. ಇನ್ನು ಗೋವುಗಳಿಗೆ ಬಿಯರ್ ಕುಡಿಸುವುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.