ನಿಯಮ ಪಾಲನೆ ಮಾಡದ ವ್ಯಾಪಾರಿಗಳು- ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್‌ ಜಾರಿ


ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನೀತಿಯ ಅನುಷ್ಠಾನ ಪ್ರಾಧಿಕಾರವಾಗಿರುವ ಬಿಬಿಎಂಪಿ ಆರೋಗ್ಯ ಇಲಾಖೆ ನಿಯಮವನ್ನು ಅನುಸರಿಸದ 50 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಮತ್ತು ಅಂಗಡಿಗಳಿಗೆ ನೋಟಿಸ್‌ ಕಳುಹಿಸಿದೆ.

ಅಧಿಕಾರಿಗಳ ಪ್ರಕಾರ, ಆರೋಗ್ಯ ನಿರೀಕ್ಷಕರು ಮಾರ್ಷಲ್‌ಗಳನ್ನು ನಿಯೋಜಿಸಿ ಮತ್ತು ನಿರಂತರ ತಪಾಸಣೆಯ ಮೂಲಕ ಈ ಆದೇಶವನ್ನು 40,000ಕ್ಕೂ ಹೆಚ್ಚು ಅಂಗಡಿ ಮತ್ತು ಸಂಸ್ಥೆಗಳಲ್ಲಿ ಜಾರಿಗೊಳಿಸಲಾಗಿದೆ ಮತ್ತು 3,616 ಪ್ರಕರಣಗಳು ಬಾಕಿ ಉಳಿದಿವೆ. ಅಧಿಕಾರಿಗಳು ಫೆಬ್ರುವರಿ 28 ಅನ್ನು ನೀತಿಯ ಅನುಷ್ಠಾನಕ್ಕೆ ಕೊನೆಯ ದಿನಾಂಕವೆಂದು ನಿಗದಿಪಡಿಸಿದ್ದಾರೆ. ವಿಫಲವಾದರೆ ಬಿಬಿಎಂಪಿಯು ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಬಹುದು ಮತ್ತು ದಂಡವನ್ನು ವಿಧಿಸಬಹುದು.

ಬಿಬಿಎಂಪಿ ಆರೋಗ್ಯ ಇಲಾಖೆಯ ಮುಖ್ಯ ಆರೋಗ್ಯಾಧಿಕಾರಿ ಸೈಯದ್ ಸಿರಾಜುದ್ದೀನ್ ಮದನಿ ಪ್ರಕಾರ, ಪಾಲಿಕೆಯು ಸುಮಾರು 50,220 ನಿಯಮ ಉಲ್ಲಂಘನೆ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 50,216 ಪ್ರಕರಣಗಳಲ್ಲಿ ಆದೇಶದ ಅನುಷ್ಠಾನಕ್ಕೆ ನೋಟಿಸ್‌ ನೀಡಿದೆ. ಇಲ್ಲಿಯವರೆಗೆ, 46,600 ಅಂಗಡಿಗಳು ಮತ್ತು ವ್ಯಾಪಾರಿಗಳು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಹೊರಡಿಸಿದ ಆದೇಶವನ್ನು ಜಾರಿಗೆ ತಂದಿದ್ದಾರೆ. ಸೂಚನಾ ಫಲಕದಲ್ಲಿ ಶೇ 60ರಷ್ಟು ಕನ್ನಡ ಪ್ರದರ್ಶಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಇತ್ತೀಚೆಗೆ, ಫೆಬ್ರುವರಿ 28ರ ಸರ್ಕಾರದ ಗಡುವಿನ ಹೊರತಾಗಿಯೂ, ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾದ ಆರೋಪದ ಮೇರೆಗೆ ಕೆಆರ್ ಪುರಂನ ಹಿರಿಯ ಆರೋಗ್ಯ ನಿರೀಕ್ಷಕರನ್ನು ಅಮಾನತು ಮಾಡಲಾಗಿದೆ.

ಶೇ 60ರಷ್ಟು ಕನ್ನಡ ನಿಯಮ ಜಾರಿ ಮಾಡದ ಟಿ.ಸಿ.ಪಾಳ್ಯದ ಅಂಗಡಿಗಳ ನಾಮಫಲಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಎಲ್.ವಿಶ್ವನಾಥ್‌ ಅವರನ್ನು ಬಿಬಿಎಂಪಿ ಅಮಾನತು ಮಾಡಿದೆ.