ಮಂಗಳೂರು: ಅಧಿಕ ದರ ವಸೂಲಿ ಮಾಡಿದ ಆಸ್ಪತ್ರೆಗೆ 5ಲಕ್ಷ ರೂ. ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ
Friday, February 23, 2024
ಮಂಗಳೂರು: ನರ್ಸಿಂಗ್ ಹೋಮ್ ಒಂದು ಗರ್ಭಿಣಿಯೊಬ್ಬರ ಹೆರಿಗೆಗೆ ನಿಗದಿತಕ್ಕಿಂತ ಅಧಿಕ ದರ ವಸೂಲಿ ಮಾಡಿರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಗರ್ಭಿಣಿಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರಿಗೆ ಸಹಜ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದಾರೆ. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯುಗೆ ದಾಖಲಿಸುವಂತೆ ಹೆರಿಗೆ ವೈದ್ಯರಾದ ನಳಿನಿ ಪೈ ಹಾಗೂ ಮಕ್ಕಳ ವೈದ್ಯ ಮಾರಿಯೋ ಜೆ. ಬುಕೆಲೋ ಸಲಹೆ ನೀಡಿದ್ದರು ಎನ್ನಲಾಗಿದೆ. ಅದರಂತೆ ಮೇ 29ರಿಂದ ಜೂ.15ರವರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು.
ಜೂ.15ರಂದು ಮಹಿಳೆ 5,34,791ರೂ. ಪಾವತಿ ಮಾಡಿದ್ದಾರೆ. 1.80ಲಕ್ಷ ರೂ. ವೈದ್ಯ ಮಾರಿಯೊ ಜೆ. ಬುಕೆಲೊ, 25ಸಾವಿರ ರೂ. ನಳಿನಿ ಪೈಗೆ ಸಂದಾಯ ಮಾಡಲಾಗಿತ್ತು. ಈ ಬಗ್ಗೆ ಮಹಿಳೆಯ ಪತಿ ನ್ಯಾಯವಾದಿ ರೋಶನ್ ರಾಜ್ ಆಸ್ಪತ್ರೆಯಲ್ಲಿ ಅಧಿಕ ವೆಚ್ಚ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರನ್ನು ನೀಡಿದ್ದರು.
ಆರೋಗ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ ವರದಿಯನ್ನು ಡಿಎಚ್‌ಒಗೆ ನೀಡಿದ್ದರು. ಆದರೆ ಇದರಿಂದ ಸಮಾಧಾನವಾಗದ ರೋಶನ್‌ರಾಜ್ ಪ್ರಧಾನಿ ಮೋದಿ ಹಾಗೂ ಆಗಿನ ರಾಜ್ಯ ಆರೋಗ್ಯ ಸಚಿವ ರಾಮುಲು ಅವರಿಗೂ ದೂರು ನೀಡಿದ್ದರು. ಕೇಂದ್ರ ಸರಕಾರವು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ಕಾಯ್ದೆ 2017 ಕಲಂ 10ಪ್ರಕಾರ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ರೋಶನ್‌ರಾಜ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು.
ಜಿಲ್ಲಾ ಗ್ರಾಹಕರ ನ್ಯಾಯಾಲಯವು ಮಹಿಳೆ ಮತ್ತು ರೋಶನ್‌ರಾಜ್ ಹಾಗೂ ವೈದ್ಯರುಗಳ ಅರ್ಜಿಯನ್ನು ಪರಿಶೀಲಿಸಿ ದೂರುದಾರರ ಮತ್ತು ಪ್ರತಿವಾದಿಗಳ ವಾದ- ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಪ್ರಕಾಶ್ ಕೆ. 5ಲಕ್ಷ ರೂ. ಹಣವನ್ನು 6 ವಾರದೊಳಗೆ ನೀಡಬೇಕೆಂದು ಆದೇಶ ನೀಡಿದ್ದಾರೆ.