ಕಾಸರಗೋಡು: ಹನಿಟ್ರ್ಯಾಪ್ ಮಾಡಿ 5ಲಕ್ಷ ಸುಲಿಗೆ - ದಂಪತಿ ಸೇರಿ ಏಳು ಮಂದಿ ಅರೆಸ್ಟ್
Thursday, February 1, 2024
ಕಾಸರಗೋಡು: ಪ್ಲ್ಯಾನ್ ಮಾಡಿ 59 ವರ್ಷದ ವ್ಯಕ್ತಿಯನ್ನು ಮಂಗಳೂರಿಗೆ ಕರೆಸಿ ಹನಿಟ್ರ್ಯಾಪ್ ಮಾಡಿ ಐದು ಲಕ್ಷ ಸುಲಿಗೆ ಮಾಡಿರುವ ಪ್ರಕರಣದ ಬೆನ್ನು ಹತ್ತಿದ ಕಾಸರಗೋಡಿನ ಮೇಲ್ಪರಂಬ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಝಿಕ್ಕೋಡ್ ಮೂಲದ ಎಂ.ಪಿ.ರುಬೀನಾ(29), ಆಕೆಯ ಪತಿ ಫೈಝಲ್ (37), ಎನ್. ಸಿದ್ದಿಕ್ (48), ಮಾಂಗಾಡ್‌ನ ದಿಲ್ಯಾದ್ (40), ನಫೀಸತ್ ಮಿಸ್ತ್ರಿಯ (40), ಅಬ್ದುಲ್ಲ ಕುಂಞಿ (32), ರಫೀಕ್ ಮಹಮ್ಮದ್ (42) ಬಂಧಿತ ಆರೋಪಿಗಳು. ಮಾಂಗಾಡ್ ನಿವಾಸಿಯನ್ನು ಇವರು ಹನಿಟ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ್ದರು.
ಜನವರಿ 23 ರಂದು ಆರೋಪಿತೆ ರುಬಿನಾ, ಸಂತ್ರಸ್ತ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದಾಳೆ. ತನ್ನ ಲ್ಯಾಪ್ ಟಾಪ್ ಹಾಳಾಗಿದ್ದು, ಸಮಾಜ ಸೇವಕರಾದ ತಾವು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾಳೆ. ಆದರೆ ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ವ್ಯಕ್ತಿ ಹೇಳಿದ್ದರು.
ಆದ್ದರಿಂದ ಲ್ಯಾಪ್‌ಟಾಪ್ ಖರೀದಿಸುವ ನೆಪದಲ್ಲಿ ರುಬಿನಾ ಮಂಗಳೂರಿಗೆ ಬಂದಿದ್ದಳು. ಈ ವೇಳೆ, ಆಕೆಗೆ ವ್ಯಕ್ತಿಯೊಂದಿಗೆ ಸಲುಗೆ ಬೆಳೆದು ಇಬ್ಬರೂ ಲಾಡ್ಜ್ ಗೆ ಹೋಗಿದ್ದಾರೆ. ಈ ವೇಳೆ ರುಬಿನಾಳ ಪತಿ ಸೇರಿದಂತೆ ಐದಾರು ಮಂದಿಯ ಲಾಡ್ಜ್ ಕೊಠಡಿ ಪ್ರವೇಶಿಸಿ ಬಲವಂತದಿಂದ ನಗ್ನ ಫೋಟೊ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಗಳು ಆ ವ್ಯಕ್ತಿಯನ್ನು ಕಾಸರಗೋಡಿಗೆ ಕರೆದೊಯ್ದು ಕೂಡಿಹಾಕಿ ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿದ್ದಾರೆ. ಆ ಬಳಿಕವೂ, ಆರೋಪಿಗಳು ಹಣಕ್ಕಾಗಿ ಬ್ಲಾಕೇಲ್ ಮಾಡಿದ್ದರು.
ಸಂತ್ರಸ್ತ ಈ ಬಗ್ಗೆ ಕಾಸರಗೋಡು ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಹಿಂದೆ ಬಿದ್ದ ಪೊಲೀಸರು ಹನಿಟ್ರ್ಯಾಪ್ ಜಾಲವನ್ನು ಖೆಡ್ಡಾಕ್ಕೆ ಕಡವಿ ಹಾಕಿದೆ.