ಪರಪುರುಷನೊಂದಿಗೆ ಸಿಕ್ಕಿಬಿದ್ದ ಮುಸ್ಲಿಂ ಮಹಿಳೆ : ಲಾಡ್ಜ್ ನೊಳಗೆ ನುಗ್ಗಿ ಯುವಕರ ನೈತಿಕ ಪೊಲೀಸ್ ಗಿರಿ


ಹಾವೇರಿ: ವಿವಾಹಿತ ಮುಸ್ಲಿಂ ಮಹಿಳೆ ಹಾಗೂ ಅನ್ಯಕೋಮಿನ ಪುರುಷನೊಬ್ಬ ಲಾಡ್ಜ್ ನಲ್ಲಿ ಜೊತೆಯಲ್ಲಿದ್ದ ವೇಳೆ ಯುವಕರ ತಂಡ ಏಕಾಏಕಿ ನುಗ್ಗಿ ಇಬ್ಬರ ಮೇಲೂ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ನಾಲ್ಕನೇ ಕ್ರಾಸ್ ಬಳಿ ಇರುವ ಖಾಸಗಿ ಲಾಡ್ಜ್ ನಲ್ಲಿ ಘಟನೆ ನಡೆದಿದೆ. 

ಪುರುಷ ಹಾಗೂ ಬುರ್ಖಾ ಧರಿಸಿದ್ದ ಮಹಿಳೆಯನ್ನೂ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ‌. ನೈತಿಕ ಪೊಲೀಸ್ ಗಿರಿಯ ವಿಡಿಯೋ ವೈರಲ್ ಆದ ಬಳಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಕಿಆಲೂರು ನಿವಾಸಿ ಅಫ್ತಾಬ ಚಂದನಕಟ್ಟಿ ಹಾಗೂ ಮದರಸಾಬ ಮಹಮ್ಮದ್ ಇಸಾಕ್ ಮಂಡಕ್ಕಿ ಸಮೀವುಲ್ಲಾ ಲಾಲನವರ ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಾಗಿದೆ. ಇವರಲ್ಲಿ ಅಫ್ತಾಬ ಚಂದನಕಟ್ಟಿ‌ ಹಾಗೂ ಮದರಸಾಬ ಮಹಮ್ಮದ್ ಇಸಾಕ್ ಮಂಡಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬುರ್ಖಾ ಧರಿಸಿ ಅನ್ಯಕೋಮಿನ ಪುರುಷನೊಂದಿಗೆ ಮುಸ್ಲಿಂ ಮಹಿಳೆ ಲಾಡ್ಜ್‌ಗೆ ಬಂದಿದ್ದನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಮುಸ್ಲಿಂ ಯುವಕರಿಗೆ ಮಾಹಿತಿ ನೀಡಿದ್ದಾನೆ. ಇದಾಗಿ ಅರ್ಧ ಗಂಟೆಯಲ್ಲೇ ಜಮಾಯಿಸಿದ ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್‌ ಕೊಠಡಿಗೆ ತೆರಳಿದೆ. ಹೊರಗಿನಿಂದ ರೂಮ್‌ನಲ್ಲಿ ನೀರಿನ ಸಮಸ್ಯೆ ಇದೆಯೆಂದು ಹೇಳಿ ಬಾಗಿಲು ತೆಗೆಯಲು ಒತ್ತಾಯಿಸಿದ್ದಾರೆ. ಒಳಗಿದ್ದವರು ನೀರು ಬರುತ್ತಿದೆ ಎಂದರೂ ಪದೇ ಪದೇ ಬಾಗಿಲು ತಟ್ಟಿದ್ದಾರೆ. ಬಳಿಕ ಒಳಗಿದ್ದವರು ಬಾಗಿಲು ತೆಗೆದ ತಕ್ಷಣ ಹಿಡಿದು ಥಳಿಸಿದ್ದಾರೆ. ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ಮಹಿಳೆಯ ಹೇಳಿಕೆಯನ್ನು ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಗೆ ಹಾನಗಲ್ ತಾಲೂಕ ಆಸ್ಪತ್ರೆಯಲ್ಲಿ ಪೊಲೀಸರು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ.