ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಲೋಕಸಭಾ ಚುನಾವಣೆ ಪ್ರಚಾರ- ಉಡುಗೊರೆ ನೀಡುವುದಿದ್ದರೆ ಮೋದಿಗೆ ಮತ ನೀಡಿ..



ಚಿಕ್ಕಮಗಳೂರು: ಪ್ರಧಾನಿ ಮೋದಿಯವರ ಅಭಿಮಾನಿ ಮತ್ತು ಬಿಜೆಪಿ ಯುವ ಮುಖಂಡ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರು ಅವರು ತಮ್ಮ ತಂಗಿಯ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮೋದಿ ಪರ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. 


ಆಲ್ದೂರಿನ ಶಶಿ ಅವರ ಸಹೋದರಿ ಸಹನಾ ಅವರ ವಿವಾಹ ಹುಣಸೂರಿನ ಸಚ್ಚಿನ್ ಎಂಬುವರೊಂದಿಗೆ ಚಿಕ್ಕಮಗಳೂರು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಫೆ.5ರಂದು ಏರ್ಪಡಿಸಲಾಗಿದೆ. 


ಈ ವಿವಾಹಕ್ಕೆ ಶಶಿ ಅವರು ತಮ್ಮ ಬಂಧುಗಳು ಮತ್ತು ಸ್ನೇಹಿತರಿಗೆ ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ 'ವಧು ವರರಿಗೆ ಉಡುಗೊರೆ ನೀಡಬೇಕೆಂದಿದ್ದರೆ ಖಂಡಿತವಾಗಿಯೂ ಈ ಬಾರಿ ನರೇಂದ್ರ ಮೋದಿಯವರಿಗೆ ಮತ ನೀಡಿ, ಏಕೆಂದರೆ ಅವರ ಮಕ್ಕಳ ಭವಿಷ್ಯದ ಭಾರತ ಸುಭದ್ರವಾಗಿರಬೇಕು' ಎಂದು ಬರೆದು ಕೊಂಡಿದ್ದಾರೆ. ಇದೀಗ ಈ ಆಹ್ವಾನ ಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ.