ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ ನಡೆದು ಮೂವರು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ರವಿವಾರ ಸಂಜೆ ನಡೆದಿದೆ. ಸ್ಫೋಟದ ತೀವ್ರತೆಗೆ ಮೃತಪಟ್ಟಿರುವವರ ದೇಹಗಳು ಛಿದ್ರಛಿದ್ರಗೊಂಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ರವಿವಾರ ಸಂಜೆ 5.30ಗಂಟೆ ಸುಮಾರಿಗೆ ಬಶೀರ್ ಎಂಬವರ ಸಾಲಿಡ್ ಫೈರ್ ವರ್ಕ್ ಎಂಬ ಪಟಾಕಿ ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ ನಡೆದಿದೆ. ಸ್ಫೋಟದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಇಬ್ಬರು ಕಾರ್ಮಿಕರ ದೇಹ, ಕೈಕಾಲುಗಳು ಛಿದ್ರಛಿದ್ರವಾಗಿದೆ. ಅಲ್ಲದೆ ದೇಹದ ಮಾಂಸದ ಮುದ್ದೆಗಳು ಹರಡಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ.
ಮೃತಪಟ್ಟವರು ಉತ್ತರ ಭಾರತ ಮೂಲದ ಕಾರ್ಮಿಕರಾಗಿದ್ದಾರೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ಆದರೆ ಸ್ಫೋಟಕ್ಕೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.