ಪ್ರಿಯಕರನೊಂದಿಗೆ ತಾಯಿ ಪರಾರಿ, ಸಾಲಗಾರರ ಕಾಟಕ್ಕೆ ತಂದೆ ತಲೆಮರೆಸಿಕೊಂಡ: ತಬ್ಬಲಿ ಮೂರು ಮಕ್ಕಳಿಗೆ ಅಂಧ ವೃದ್ಧನೇ ಆಸರೆ
Monday, January 22, 2024
ಶ್ರೀರಂಗಪಟ್ಟಣ: ತಾಯಿ ಪ್ರಿಯಕರನೊಂದಿಗೆ ಪರಾರಿಯಾಗಿ, ತಂದೆ ಸಾಲಗಾರರ ಕಾಟ ತಡೆಯಲಾಗದೆ ಊರು ಬಿಟ್ಟಿದ್ದಾನೆ. ಆದರೆ ಕಣ್ಣು ಕಾಣದ 60 ವರ್ಷದ ವಯೋವೃದ್ಧನೊಬ್ಬು ಮೂವರು ಪುಟ್ಟ ಮಕ್ಕಳನ್ನು ಸಾಕಲು ಹೆಣಗಾಡುತ್ತಿದ್ದಾನೆ. ಈ ಕರುಣಾಜನಕ ಸನ್ನಿವೇಶ ನಡೆದಿರುವುದು ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಉನಿಕಿಲಿ ಬಡಾವಣೆಯಲ್ಲಿ.
60 ವರ್ಷದ ಚಿನ್ನಪ್ಪ ಹೆತ್ತವರು ತೊರೆದು ಹೋಗಿರುವ ಗೌತಮ್ (7), ಭೂಮಿಕಾ (6), ವರುಣ (4) ಎಂಬ ಮೂವರು ಪುಟಾಣಿಗಳನ್ನು ಸಾಕುವ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸೀಟು ಹರಿದುಹೋಗಿರುವ, ಮಳೆ ಬಂದರೆ ಸೋರುವ ಮನೆಯಲ್ಲಿ ಇವರ ಜೀವನ ಸಾಗುತ್ತಿದೆ.
ಈ ಪುಟ್ಟ ಮಕ್ಕಳ ತಾಯಿ 2 ವರ್ಷಗಳ ಹಿಂದೆ ಪತಿ ಹಾಗೂ ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಬಳಿಕ ಆಕೆಯ ಗಂಡ ತಿರುಮಲಪ್ಪ (ಮಂಜುನಾಥ್) ಊರಿನಲ್ಲಿ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಊರು ಬಿಟ್ಟಿದ್ದಾನೆ. ಇದೀಗ ಮೂವರು ಮಕ್ಕಳ ಪಾಲಿಗೆ ಮಂಜುನಾಥ್‌ನ ತಂದೆ ಚಿನ್ನಪ್ಪ ಅವರೇ ದಿಕ್ಕು. ಆದರೆ ಚಿನ್ನಪ್ಪ ಅಂಧರಾಗಿದ್ದು, ಇವರಿಗೆ ವಾಸಿಸಲು ಮನೆಯೂ ಇಲ್ಲ. ಆದ್ದರಿಂದ ಗ್ರಾಮಸ್ಥರೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಅದಕ್ಕೆ ಗೋಡೆ ಹಾಗೂ ಕಿಟಕಿಯಿಲ್ಲ. ಮಣ್ಣು ನೆಲದಲ್ಲಿಯೇ ಈ ನಾಲ್ವರು ದಿನ ದೂಡುತ್ತಿದ್ದಾರೆ.
ತಂದೆ ದೂರವಾದ ಬಳಿಕ ಹಿರಿಯ ಮಗ ಗೌತಮ್ ವಾರಕ್ಕೆ 1 ಅಥವಾ 2 ದಿನ ಶಾಲೆಗೆ ಹೋಗಿ ತಂಗಿ ಮತ್ತು ತಮ್ಮನ ಆರೈಕೆಯೊಂದಿಗೆ ತಾತನಿಗೆ ನೆರವಾಗುತ್ತಿದ್ದಾನೆ. ತಾತನ ಸಲಹೆ ಪಡೆದು ಮನೆಗೆಲಸ ಮಾಡುತ್ತಾನೆ. ಬಟ್ಟೆ ಒಗೆಯುತ್ತಾನೆ. ಆಟ ಆಡಿ ನಲಿದಾಡುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಈ ಪುಟಾಣಿಯ ಹೆಗಲೇರಿದೆ. ಕಣ್ಣು ಕಾಣದ ವಯೋವೃದ್ಧ ಹಾಗೂ ಜಗತ್ತೇ ಕಾಣದ ಬಾಲರ ಪರಿಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಜನಪ್ರತಿನಿಧಿಗಳು ಗಮನಿಸಿ ನೆರವಿಗೆ ಧಾವಿಸಬೇಕಾಗಿದೆ.