ನೂತನ ವರ್ಷದಲ್ಲಿ ಷೇರು ಮಾರುಕಟ್ಟೆ ಪರಿಸ್ಥಿತಿ ಏನು? ಹತ್ತು ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ ಮೋತಿಲಾಲ್ ಓಸ್ವಾಲ್


ಮುಂಬೈ: ಭಾರತದ ಒಟ್ಟಾರೆ ಆರ್ಥಿಕತೆ 2023ರಲ್ಲಿ ಪ್ರಬಲವಾಗಿತ್ತು. 2024ರಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯಲಿದೆ ಎಂದು ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ಅಂದಾಜಿಸಿದೆ.

ಭಾರತದ ಷೇರು ಮಾರುಕಟ್ಟೆ ಪ್ರಸಕ್ತ ವರ್ಷದಲ್ಲಿ ಕೆಲವು ವಿಸ್ಮಯಕಾರಿ ಮೈಲಿಗಲ್ಲಿನೊಂದಿಗೆ ಕೊನೆಗೊಳ್ಳುತ್ತಿದೆ. ನಿಫ್ಟಿ ಸೂಚ್ಯಂಕವು 21500 ಗಡಿ ದಾಟಿದೆ. ಬಿಎಸ್ಇ ಸೂಚ್ಯಂಕವು 71000ರ ಮೈಲುಗಲ್ಲು ತಲುಪಿದೆ.

2024ನೇ ವರ್ಷದಲ್ಲೂ ಹಲವಾರು ಪ್ರಮುಖ ಘಟನೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ. ಮುಂದಿನ ವರ್ಷದಲ್ಲಿ ಬ್ರೋಕರೇಜ್ ಸಂಸ್ಥೆಯು 10 ಸ್ಟಾಕ್‌ಗಳನ್ನು ಖರೀದಿಸಲು ಶಿಫಾರಸು ಮಾಡಿದೆ. ಟಾಟಾ ಕನ್ಸೂಮರ್ಸ್​, ಎಲ್ & ಟಿ ಮತ್ತು ಎಲ್ & ಟಿ ಟೆಕ್ನಾಲಜಿ ಸರ್ವಿಸಸ್, ಜೊಮಾಟೊ, ಕೋಲ್ ಇಂಡಿಯಾ, ಎಸ್‌ಬಿಐ, ಆಯಿಲ್ ಇಂಡಿಯಾ ಸಂಸ್ಥೆಯ ಷೇರುಗಳು ಖರೀದಿಸಬಹುದು ಎಂದು ಬ್ರೋಕರೇಜ್ ಸಂಸ್ಥೆ ಹೇಳುತ್ತದೆ.

2023-24ರ ಮೊದಲಾರ್ಧ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಉತ್ಪಾದನೆ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ 7.7% ರಷ್ಟು ತಲುಪಿ ಬಲವಾದ ಪ್ರದರ್ಶನ ನೀಡಿದೆ. ಇದರಿಂದಾಗಿ ಆರ್​ಬಿಐ ತನ್ನ ಜಿಡಿಪಿ ಮುನ್ಸೂಚನೆಯನ್ನು ಶೇ.7ಕ್ಕೆ ಪರಿಷ್ಕರಿಸಿತು. ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ 6.5% ಬೆಳವಣಿಗೆಯೊಂದಿಗೆ 2024-25ನೇ ಸಾಲಿನಲ್ಲಿ ಆರ್​ಬಿಐ ದೃಢವಾದ ಬೆಳವಣಿಗೆಯ ಮುನ್ಸೂಚನೆಯನ್ನು ನೀಡಿದೆ. ಮತ್ತೊಂದೆಡೆ, 2023-24ರ ಮೊದಲಾರ್ಧ ವರ್ಷದಲ್ಲಿ ಬೃಹತ್​ ಕಂಪನಿಗಳ ಗಳಿಕೆಯು (ನಿಫ್ಟಿ ಸೂಚ್ಯಂಕದಲ್ಲಿ ಪಟ್ಟಿ ಮಾಡಲಾಗುವ ಕಂಪನಿಗಳು) ಶೇಕಡಾ 30%ರಷ್ಟು ಬೆಳವಣಿಗೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ.

ಅಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಜಯವು, 2024ರ ಲೋಕಸಭಾ ಚುನಾವಣೆಯ ಬಳಿಕ ರಾಜಕೀಯ ನಿರಂತರತೆಯ ಬಗ್ಗೆ ಹೂಡಿಕೆದಾರರ ವಿಶ್ವಾಸ ಅಧಿಕವಾಗುವಂತೆ ಮಾಡಿದೆ. ಇದು ಭಾರತಕ್ಕೆ ಸ್ಥೂಲ ಮತ್ತು ನೀತಿ ಆವೇಗಕ್ಕೆ ಉತ್ತಮವಾಗಿದೆ. ಈ ಸಮಯದಲ್ಲಿ, ಪ್ರಮುಖ ಆರ್ಥಿಕತೆಗಳಲ್ಲಿ (ಜಿಡಿಪಿ ಮತ್ತು ಕಾರ್ಪೊರೇಟ್ ಗಳಿಕೆಗಳೆರಡೂ) ಅತ್ಯಧಿಕ ಬೆಳವಣಿಗೆಯನ್ನು ಕಾಣುತ್ತಿದೆ” ಎಂದು ಮೋತಿಲಾಲ್ ಓಸ್ವಾಲ್​ ಹೇಳಿದೆ.

ಇದೆಲ್ಲವೂ ಭಾರತದ ರೇಟಿಂಗ್‌ನಲ್ಲಿ ಅಪ್‌ಗ್ರೇಡ್ ಮಾಡಲು ಮತ್ತು ವಿವಿಧ ಜಾಗತಿಕ ಸಂಸ್ಥೆಗಳಿಂದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಬಿಎಸ್‌ಇ-ಪಟ್ಟಿ ಮಾಡಿದ ಕಂಪನಿಗಳ ಮಾರುಕಟ್ಟೆ-ಕ್ಯಾಪ್ (ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಬಂಡವಾಳ) ಸಾರ್ವಕಾಲಿಕ ಗರಿಷ್ಠ 4 ಲಕ್ಷ ಕೋಟಿ ಡಾಲರ್​ ಗಡಿ ದಾಟಿದೆ. ಈ ಮೂಲಕ ಇನ್ಫಾಕ್ಟ್ ಎನ್‌ಎಸ್‌ಇ ಹಾಂಗ್ ಕಾಂಗ್ ಷೇರು ಮಾರುಕಟ್ಟೆಗಳನ್ನು ಹಿಂದಿಕ್ಕಿದೆ. ಅಲ್ಲದೆ, ವಿಶ್ವದ 7 ನೇ ಅತಿದೊಡ್ಡ ಷೇರು ಮಾರುಕಟ್ಟೆ ವಿನಿಮಯ ಕೇಂದ್ರವಾಗಿದೆ.” ಎಂದು ಮೋತಿಲಾಲ್ ಓಸ್ವಾಲ್​ ಹೇಳಿದೆ.

ಜಾಗತಿಕ ಅಂಶಗಳು ಅನುಕೂಲಕರವಾಗಿರುವುದರಿಂದ ಸಕಾರಾತ್ಮಕ ದೇಶೀಯ ಸೂಚನೆಗಳು ಮತ್ತಷ್ಟು ಬಲವನ್ನು ಪಡೆದುಕೊಂಡಿವೆ. ಅಮೆರಿಕದ ಕೇಂದ್ರೀಯ ಬ್ಯಾಂಕ್​ ಫೆಡರಲ್​ ರಿಸರ್ವ್ 2023ರ ತನ್ನ ಕೊನೆಯ ಹಣಕಾಸು ನೀತಿಯಲ್ಲಿ 2024 ರಲ್ಲಿ ಬಡ್ಡಿ ದರ ಕಡಿತದ ಸುಳಿವು ನೀಡಿದೆ. ಇದು ಜಾಗತಿಕವಾಗಿ ಭಾರಿ ಆಶಾವಾದಕ್ಕೆ ಕಾರಣವಾಗಿದ್ದು, ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಕೂಡ ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುವ ಸಾಧ್ಯತೆಯಿದೆ. ಆದರೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ವರ್ಷವಿಡೀ ಮಾರುಕಟ್ಟೆಯಲ್ಲಿ ಚಂಚಲತೆಯನ್ನು ಸೃಷ್ಟಿಸಿದವು, ಆದರೆ, ಇದರ ಪ್ರಭಾವವು ಸೀಮಿತವಾಗಿತ್ತು. ಸೂಯೆಜ್ ಕಾಲುವೆ ಮಾರ್ಗದ ಮೇಲಿನ ಈಗ ನಡೆದಿರುವ ದಾಳಿಯು ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದ್ದು, ಜಾಗತಿಕ ಪೂರೈಕೆ ಸರಪಳಿಗೆ ಬೆದರಿಕೆಯನ್ನುಂಟು ಮಾಡಿದೆ. ಇದು ಸರಕುಗಳ ಮೇಲೆ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಆದಾಯದ ಮೇಲೆ ಪರಿಣಾಮ ಬೀರಬಹುದು ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

“ಭಾರತದ ಸ್ಥೂಲ ಮತ್ತು ವೈಯಕ್ತಿಕ ಮೂಲಭೂತ ಆರ್ಥಿಕತೆಯು ಪ್ರಬಲವಾಗಿ ಉಳಿದಿದ್ದು, ಮಾರುಕಟ್ಟೆಯು ಹೊಸ ಗರಿಷ್ಠ ಮಟ್ಟವನ್ನು ತಲುಪಲು ಸಹಾಯ ಮಾಡುತ್ತಿದೆ. ನಿಫ್ಟಿಯು 2023 ರಲ್ಲಿ ಇದುವರೆಗೆ ಶೇಕಡಾ 18ರಷ್ಟು ಆದಾಯವನ್ನು ನೀಡಿದೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್‌ಗಳು ನಿಫ್ಟಿ ಮಿಡ್‌ಕ್ಯಾಪ್ ಅಪಾರ ಹೆಚ್ಚಳ ಕಂಡಿವೆ. ನಿಫ್ಟಿ ಮಿಡ್​ ಕ್ಯಾಪ್​ಗಳು 44% ರಷ್ಟು ಹಾಗೂ ಸ್ಮಾಲ್‌ ಕ್ಯಾಪ್​ಗಳು 54% ಏರಿಕೆ ದಾಖಲಿಸಿವೆ. ಪಿಎಸ್‌ಯುಗಳು, ರಿಯಾಲ್ಟಿ , ವಿದ್ಯುತ್, ರಕ್ಷಣೆ, ಶಿಪ್ಪಿಂಗ್, ರಸಗೊಬ್ಬರ ಮೊದಲಾದ ವಲಯಗಳ ಜತೆಗೆ ಆಟೋ ಕ್ಷೇತ್ರದಲ್ಲಿ ಭಾರಿ ಖರೀದಿ ಆಸಕ್ತಿ ಕಂಡುಬಂದಿತು. ಪಿಎಸ್‌ಯು ಬ್ಯಾಂಕ್‌ಗಳು ಖಾಸಗಿ ಬ್ಯಾಂಕ್‌ಗಳನ್ನು ಮೀರಿಸಿ ವಹಿವಾಟು ನಡೆಸಿವೆ ಎಂದು ಮೋತಿಲಾಲ್​ ಓಸ್ವಾಲ್​ ವಿಶ್ಲೇಷಿಸಿದೆ.

2024ರಲ್ಲೂ ಮಿನುಗಲಿದೆ ಮಾರುಕಟ್ಟೆ :

“ಮುಂದಿನ ವರ್ಷ ಹಲವಾರು ಪ್ರಮುಖ ಘಟನೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ. ಮೇ 2024 ರಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ ಮತ್ತು ಚುನಾವಣೆ ನಂತರದ ಮೊದಲ ಬಜೆಟ್ ಪ್ರಮುಖವಾಗಿರುತ್ತದೆ. ಜಾಗತಿಕ ವಲಯಲದಲ್ಲಿ, ಆರ್ಥಿಕ ಬೆಳವಣಿಗೆ, ದರ ಕಡಿತ, ಭೌಗೋಳಿಕ ರಾಜಕೀಯ ಸಮಸ್ಯೆಗಳ ಜೊತೆಗೆ ಹಣದುಬ್ಬರದಂತಹ ಅಂಶಗಳು ಪ್ರಮುಖ ಚಾಲಕಗಳಾಗಿರುತ್ತವೆ. ಭಾರತವು ಆರ್ಥಿಕವಾಗಿ ಮಿನುಗುವ ತಾರೆಯಾಗಿ ಉಳಿದಿದ್ದು, ಈ ನಿರ್ವಹಣೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಮೋತಿಲಾಲ್​ ಓಸ್ವಾಲ್​ ಹೇಳಿದೆ.

ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿನ ಚುನಾವಣೆ ಪೂರ್ವ ರ್ಯಾಲಿಯು ಮುಂದುವರಿಯುವ ಸಾಧ್ಯತೆ ಇರುವುದರಿಂದ ಮಾರುಕಟ್ಟೆಯ ಭಾವನೆಯು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ಯಾವುದೇ ದರ ಕಡಿತವು ಮಾರುಕಟ್ಟೆಗೆ ಹೆಚ್ಚುವರಿ ಉತ್ತೇಜನವನ್ನು ನೀಡುತ್ತದೆ. 2024 ರಲ್ಲಿ ಜಾಗತಿಕವಾಗಿ ಬ್ಯಾಂಕ್​ ಬಡ್ಡಿ ದರ ಕಡಿತದ ನಿರೀಕ್ಷೆಗಳ ಜೊತೆಗೆ ಪ್ರಮುಖ ಕ್ಷೇತ್ರಗಳಾದ್ಯಂತ ದೀರ್ಘಾವಧಿಯ ಕ್ಯಾಪೆಕ್ಸ್ (ಕ್ಯಾಪಿಟಲ್​ ಎಕ್ಸ್​ಪೆಂಡಿಚರ್​- ಬಂಡವಾಳ ವೆಚ್ಚ) ಕಡೆಗೆ ಸರ್ಕಾರ ಗಮನ ಹರಿಸಿದರೆ, ಷೇರು ಮಾರುಕಟ್ಟೆಗೆ ಅನುಕೂಲಕರ ಎಂದು ಅದು ಹೇಳಿದೆ.

“ಬಿಎಫ್‌ಎಸ್‌ಐ, ಇಂಡಸ್ಟ್ರಿಯಲ್ಸ್, ರಿಯಲ್ ಎಸ್ಟೇಟ್, ಆಟೋ ಮತ್ತು ಗ್ರಾಹಕ ವಿವೇಚನೆಯು ವಲಯವುಗಳು ಮುಂದಿನ ವರ್ಷ ಉತ್ತಮವಾಗಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂದಿನ ಎರಡು ತ್ರೈಮಾಸಿಕಗಳಲ್ಲಿ, ಒಟ್ಟಾರೆ ಮಾರುಕಟ್ಟೆಯ ಏರುಗತಿಗೆ ಈ ವಲಯಗಳು ಪ್ರಮುಖ ಕೊಡುಗೆ ನೀಡಬಹುದಾಗಿದೆ ಎಂದು ನಾವು ನಂಬುತ್ತೇವೆ” ಮೋತಿಲಾಲ್​ ಓಸ್ವಾಲ್​ ಹೇಳಿದೆ.

2024ಕ್ಕೆ ಮೋತಿಲಾಲ್ ಓಸ್ವಾಲ್ ಆಯ್ಕೆ ಮಾಡಿರುವ ಟಾಪ್ 10 ಕ್ಯಾಪ್​ಗಳು (ಷೇರುಗಳು):

ಎಸ್​ಬಿಐ: ಗುರಿ ಬೆಲೆ ರೂ 700
ಹೀರೋ ಮೋಟೋಕಾರ್ಪ್‌ನ : ರೂ 4,480
ಸ್ಪಂದನಾ ಸ್ಫೂರ್ತಿ: ರೂ 1,200
ಲಾರ್ಸನ್ ಮತ್ತು ಟೂಬ್ರೋ: ರೂ 3,660
ದಾಲ್ಮಿಯಾ ಭಾರತ: ರೂ 2,800
ಟಾಟಾ ಕನ್ಸೂಮರ್​: ರೂ 1,110
ಕೋಲ್ ಇಂಡಿಯಾ: ರೂ 380
ಜೊಮಾಟೊ: ರೂ 135
ಆಯಿಲ್ ಇಂಡಿಯಾ: ರೂ 410
ಕಜಾರಿಯಾ ಸೆರಾಮಿಕ್ಸ್‌: ರೂ 1,580