ಆಟವಾಡುತ್ತಿದ್ದ ಬಾಲಕಿ ಮೇಲೆ ಎರಗಿದ ಬೀದಿನಾಯಿ: ಹೃದಯಾಘಾತದಿಂದ ಸಾವು


ಚಂಡೀಗಢ: ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿರುವ ಪರಿಣಾಮ ಆಕೆ ಭೀತಿಗೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ರಾಜಧಾನಿ ಚಂಡೀಗಢದ ಮಣಿ ಮಜ್ರಾ ಎಂಬ ಪ್ರದೇಶದಲ್ಲಿ ನಡೆದಿದೆ.

ಜಸ್ಮೀತ್​ (10) ಎಂಬ ಬಾಲಕಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಬಾಲಕಿ ತಂದೆ ಹರ್​ದೇವ್​ ಸಿಂಗ್​ ಈ ಬಗ್ಗೆ ಪ್ರತಿಕ್ರಿಯಿಸಿ, ಶಾಲೆಯಿಂದ ಮೆನೆಗೆ ಬಂದ ಬಳಿಕ ನನ್ನ ಪುತ್ರಿ ಜಸ್ಮೀತ್ ತನ್ನ ಸ್ನೇಹಿತರೊಂದಿಗೆ ಆಟವಾಡಲೆಂದು ಪಾರ್ಕಿಗೆ ತೆರಳಿದ್ದಳು. ಆಟವಾಡುತ್ತಿದ್ದ ವೇಳೆ ಆಕೆಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದೆ. ಇದರಿಂದ ಭಯಗೊಂಡ ಆಕೆ ಓಡಲು ಆರಂಭಿಸಿದ್ದಾಳೆ. ಆದರೆ ಅಷ್ಟರಲ್ಲೇ ಆಕೆ ಹೃದಯಾಘಾತವಾಗಿ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಇಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗಿದೆ. ಬೀದಿನಾಯಿಗಳು ಅನೇಕರನ್ನು ಕಚ್ಚಿ ಗಾಯಗೊಳಿಸಿವೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಂದು ನಮ್ಮ ಮಗು ಮೇಲಾಗಿರುವುದು ನಾಳೆ ಇನ್ನೊಬ್ಬರ ಮಕ್ಕಳ ಮೇಲಾಗಬಹುದು. ಹಾಗಾಗುವುದಕ್ಕಿಂತ ಮುಂಚೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿ ತಂದೆ ಹರ್​ದೇವ್​ ಸಿಂಗ್ ಆಗ್ರಹಿಸಿದ್ದಾರೆ.