ಅಮೇರಿಕಾದ ವಿಲಾಸಿ ಬಂಗಲೆಯಲ್ಲಿ ಭಾರತೀಯ ಮೂಲದ ದಂಪತಿ, ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Saturday, December 30, 2023
ನ್ಯೂಯಾರ್ಕ್: ಅಮೆರಿಕಾದ ಮೆಸಾಚುಸೆಟ್ಸ್‌ನ ವಿಲಾಸಿ ಬಂಗಲೆಯಲ್ಲಿ ಭಾರತೀಯ ಮೂಲದ ದಂಪತಿ ಸಹಿತ ಅವರ 18 ವರ್ಷದ ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಕೇಶ್ ಕಮಲ್ (57), ಅವರ ಪತ್ನಿ ಟೀನಾ (54) ಮತ್ತು ಪುತ್ರಿ ಆರಿಯಾನಾ(18) ಮೃತಪಟ್ಟವರು. ಮೆಸಾಚುಸೆಟ್ಸ್‌ನ ಡೋವರ್‌ನಲ್ಲಿರುವ ತಮ್ಮ 5 ಮಿಲಿಯನ್ ಡಾಲರ್ ಮೌಲ್ಯದ ಬಂಗಲೆಯಲ್ಲಿ ಗುರುವಾರ ರಾತ್ರಿ ಸುಮಾರು 7.30ಕ್ಕೆ ಅವರ ಮೃತದೇಹಗಳು ಪತ್ತೆಯಾಗಿವೆ.
ಟೀನಾ ಹಾಗೂ ಅವರ ಪತಿ ರಾಕೇಶ್ ಈ ಹಿಂದೆ ಎಜುನೋವ ಎಂಬ ಶೈಕ್ಷಣಿಕ ಕಂಪನಿಯನ್ನು ನಡೆಸುತ್ತಿದ್ದರು. ಸದ್ಯ ಅದೀಗ ಕಾರ್ಯಾಚರಿಸುತ್ತಿಲ್ಲ. ರಾಕೇಶ್ ಸ್ಥಳೀಯವಾಗಿ ರಿಕ್ ಎಂದೂ ಪರಿಚಿತರಾಗಿದ್ದರು. ಅವರ ಮೃತದೇಹದ ಪಕ್ಕದಲ್ಲಿ ಪಿಸ್ತೂಲು ಪತ್ತೆಯಾಗಿದೆ. ಈ ಸಾವಿನ ಹಿಂದೆ ಹೊರಗಿನವರ ಕೈವಾಡ ಇರುವ ಸಾಧ್ಯತೆಯಿಲ್ಲವೆಂದು ತಿಳಿಯಲಾಗಿದೆ. ರಾಕೇಶ್ ಅವರೇ ತಮ್ಮ ಪತ್ನಿ ಹಾಗೂ ಪುತ್ರಿಯನ್ನು ಗುಂಡಿಕ್ಕಿ ಸಾಯಿಸಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಕುಟುಂಬದ ಬಂಗಲೆಯನ್ನು ಒಂದು ವರ್ಷದ ಹಿಂದೆ ಮೆಸಾಚುಸೆಟ್ಸ್‌ನ ವಿಲ್ಸಂಡೇಲ್ ಅಸೋಸಿಯೇಟ್ಸ್‌ಗೆ 3 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲಾಗಿತ್ತು. ಈ 19,000 ಚದರ ಅಡಿ ಬಂಗಲೆಯನ್ನು ಕುಟುಂಬ 2019ರಲ್ಲಿ ಖರೀದಿಸಿತ್ತೆನ್ನಲಾಗಿದೆ. ಈ ದಂಪತಿಯ ಕಂಪೆನಿ 2016ರಲ್ಲಿ ಆರಂಭಿಸಲಾಗಿದ್ದರೂ ಡಿಸೆಂಬರ್ 2021ರಲ್ಲಿ ಅದನ್ನು ಆರ್ಥಿಕ ಸಮಸ್ಯೆಯಿಂದಾಗಿ ವಿಸರ್ಜಿಸಲಾಗಿತ್ತು. ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿತ್ತು ಎಂದು ಹೇಳಲಾಗಿದೆ. ದಂಪತಿಯ ಪುತ್ರಿ ಮಿಡಲ್‌ಬರಿ ಕಾಲೇಜಿನಲ್ಲಿ ಕಲಿಯುತ್ತಿದ್ದರೆಂದು ತಿಳಿದು ಬಂದಿದೆ.