ಡಿಸೆಂಬರ್ 25 ರಂದು ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ- 2 ಸಾವಿರ ಜನರಿಗೆ 4 ಕೋಟಿ ರೂ “ನೆರವು”
ಮಂಗಳೂರು: ಎಂ ಆರ್ ಜಿ ಗ್ರೂಪ್ ಚೇರ್ ಮೆನ್ ಕೆ ಪ್ರಕಾಶ್ ಶೆಟ್ಟಿ ಅವರು ಪ್ರತೀ ವರ್ಷ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಪ್ರದಾನ ಕಾರ್ಯಕ್ರಮ ಡಿಸೆಂಬರ್ 25ರಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೆ ಪ್ರಕಾಶ್ ಶೆಟ್ಟಿ ನೆರವು ಪ್ರದಾನ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಕಾಪು ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ ನ ಚೇರ್ಮನ್ ಕೆ. ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದರು.
ಈ ವರ್ಷ ಒಟ್ಟು 2000 ಕುಟುಂಬಗಳಿಗೆ ಒಟ್ಟು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನೆರವನ್ನು ವಿತರಣೆ ಮಾಡಲಾಗುತ್ತಿದೆ. ಒಂದು ಕುಟುಂಬದಲ್ಲಿ ಸರಾಸರಿ ಐದು ಮಂದಿ ಎಂದು ಪರಿಗಣಿಸಿದರೂ ಈ ನಗವಿನಿಂದ ಸುಮಾರು ಹತ್ತು ಸಾವಿರ ಜನರಿಗೆ ಪರೋಕ್ಷ ಪ್ರಯೋಜನವಾಗುತ್ತದೆ. ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಒಂದು ರೀತಿಯಲ್ಲಿ ಎಸ್.ಒ.ಪಿ. ಮಾದರಿಯ ಪ್ರಕ್ರಿಯೆಯನ್ನು ಅನುಸರಿಸಿದ್ದೇವೆ. ಅರ್ಹರು ವಂಚಿತರಾಗಬಾರದು ಎಂಬ ಕಾರಣಕ್ಕೆ ಸ್ಥಳೀಯ ಸಂಘ ಸಂಸ್ಥೆಗಳನ್ನು, ಸ್ವಯಂಸೇವಕರನ್ನು ಬಳಸಿಕೊಂಡು ಅವರ ಆರ್ಥಿಕ ಸ್ಥಿತಿಗತಿ ಮತ್ತು ಅವರು ಎದುರಿಸುತ್ತಿರುವ ಪರಿಸ್ಥಿತಿಯ ಪ್ರತ್ಯಕ್ಷ ಮಾಹಿತಿ ಪಡೆದು ಆಯ್ಕೆಯನ್ನು ಮಾಡಲಾಗಿದೆ ಎಂದರು.
ಆಯ್ಕೆಗೆ ಸಂಬಂಧಿಸಿ ನಾವೇ ಒಂದು ಸ್ವತಂತ್ರ ಸಮಿತಿ ಮಾಡಿದ್ದೇವೆ. ಅದರ ಅನುಸಾರ ಪಟ್ಟಿ ತಯಾರಿಸಿದ್ದೇವೆ. ಸಂಘ ಸಂಸ್ಥೆಗಳ ಮೂಲಕ ಆಯ್ಕೆ ಮಾಡಿರುವುದರಿಂದ ಫಲಾನುಭವಿಗಳನ್ನು ಕರೆದುಕೊಂಡು ಬರುವ ಹೊಣೆಗಾರಿಕೆಯನ್ನು ಆಯಾ ಪ್ರದೇಶದ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅವರ ಪ್ರಯಾಣ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ. ನೆರವು ವಿತರಣೆ ಸಮಾರಂಭದಲ್ಲಿ 25 ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಅಲ್ಲಿ ಫಲಾನುಭವಿಗಳು ತಮ್ಮ ಹೆಸರು ಹೇಳಿ ಮತ್ತು ಈಗಾಗಲೇ ವಿತರಣೆ ಮಾಡಿರುವ ಟೋಕನ್ ಗಳನ್ನು ತೋರಿಸಿ ಚೆಕ್ ಪಡೆಯಬಹುದು. ಎಲ್ಲಿಯೂ ಅನವಶ್ಯಕ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಮಾನಸಿಕ, ಅಂಗವೈಕಲ್ಯ, ದೀರ್ಘ ಕಾಲೀನ ಚಿಕಿತ್ಸೆ ಬೇಡುವ ಕ್ಯಾನ್ಸರ್ ನಂತಹ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆಗೆ ನೆರವು ನೀಡಲು ಆದ್ಯತೆ ಕೊಟ್ಟಿದ್ದೇವೆ. ಪ್ರತಿಭಾವಂತ ಆದರೆ ಕಷ್ಟದ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ್ದೇವೆ. ಉಳಿದಂತೆ ಕ್ರೀಡಾಳುಗಳು, ರಾಷ್ಟ್ರ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಸಾಧಕರನ್ನು ಪ್ರೋತ್ಸಾಹಿಸಲು ಅವರನ್ನು ಗೌರವಿಸಲು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದರು.
ಈ ಹಿಂದಿನ ವರ್ಷದಂತೆ ಈ ಬಾರಿಯೂ ಸಂಘ ಸಂಸ್ಥೆಗಳನ್ನು ಅವುಗಳ ಕಾರ್ಯ ವೈಖರಿ, ಹಮ್ಮಿಕೊಂಡ ಸಮಾಜಮುಖಿ ಚಟುವಟಿಕೆಗಳನ್ನು ಗಮನಿಸಿ ನೆರವು ನೀಡುವುದಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.