ವಿವಾಹಕ್ಕೆ ಮೊದಲೇ ವರದಕ್ಷಿಣೆಯಾಗಿ ಚಿನ್ನಾಭರಣ, ಎಕ್ಸ್‌ಯುವಿ ಕಾರಿಗೆ ಬೇಡಿಕೆ: ನೀಡದಿದ್ದರೆ ಮದುವೆಯಾಗುವುದಿಲ್ಲವೆಂದು ಧಮ್ಕಿ - 21ರ ಯುವತಿ ಆತ್ಮಹತ್ಯೆ
Tuesday, December 19, 2023
ಮೈಸೂರು: ವಿವಾಹಕ್ಕೆ ಮೊದಲೇ ವರದಕ್ಷಿಣೆಗೆ ಒತ್ತಾಯ ಮಾಡಿದ್ದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಊಟಿ ಮೂಲದ ಯುವತಿ ವಿ. ಕವೀಶ(21) ಆತ್ಮಹತ್ಯೆಗೆ ಶರಣಾದವರು.
ಕಿರಣ್ ಎಂಬಾತನನ್ನು ಕವೀಶ ಪ್ರೀತಿಸುತ್ತಿದ್ದಳು. ಎರಡೂ ಕಡೆಯ ಕುಟುಂಬಸ್ಥರು ವಿವಾಹಕ್ಕೆ ಸಮ್ಮತಿ ಸೂಚಿಸಿದ್ದರಿಂದ ಕಳೆದ ಸೆ.17 ರಂದು ನಿಶ್ಚಿತಾರ್ಥ ಕೂಡ ನೆರವೇರಿತ್ತು. ಈ ನಡುವೆ, ಕಿರಣ್ ತಾಯಿ ಹಾಗೂ ಸೋದರ ಮಾವ ಚಿನ್ನಾಭರಣ ಮತ್ತು ಎಕ್ಸ್‌ಯುವಿ ಕಾರನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ವರದಕ್ಷಿಣೆ ನೀಡದಿದ್ದರೆ ಮದುವೆ ನಡೆಯುವುದಿಲ್ಲ ಎಂದು ಸಹ ತಿಳಿಸಿದ್ದರು. ಇದರಿಂದ ಮನನೊಂದ ಕವೀಶ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಆರೋಪಿಸಿ ಮೃತಪಟ್ಟ ಕವೀಶರ ತಂದೆ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.