ಕೇರಳದಲ್ಲಿ ಕೊರೊನಾದ ಉಪತಳಿ ಜೆಎನ್ 1 ಮೊದಲ ಪ್ರಕರಣ ಪತ್ತೆ - ಎರಡು ಬಲಿ
Sunday, December 17, 2023
ಬೆಂಗಳೂರು: ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್ 1 ಮೊದಲ ಪ್ರಕರಣ ಭಾರತದ ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ.
ಜೆಎನ್ 1 ರೂಪಾಂತರಿ ತಳಿ ಓಮಿಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕರೆಯಲಾಗುತ್ತದೆ. ಇದು ಅಪಾಯಕಾರಿಯೇ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಈ ತಳಿ ಬಹಳ ಶೀಘ್ರವಾಗಿ ಹರಡುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಜೆಎನ್ 1ಗೆ ಬಲಿಯಾಗಿದ್ದಾರೆ. ಆದರೆ ಎರಡೇ ದಿನಗಳಲ್ಲಿ 2ನೇ ಬಲಿಯಾಗಿದ್ದು ಮಾತ್ರ ಕಳವಳಕ್ಕೆ ಕಾರಣವಾಗಿದೆ.
ವೃದ್ಧ ಮೃತಪಟ್ಟಿರುವ ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಬಂಧವನ್ನು ಹೇರಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವೂ ಅಲರ್ಟ್ ಆಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಮಂಗಳವಾರ ಸಭೆ ಕರೆದಿದ್ದು ಬಳಿಕ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಾಹುತ ಆಗುವುದಕ್ಕೆ ಬಿಡಬಾರದು ಎಂದಿದ್ದಾರೆ. ಗಡಿ ಭಾಗಗಳನ್ನು ಸೀಲ್ ಮಾಡೋದು, ರೈಲ್ವೇ ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ ತಪಾಸಣೆ ಮಾಡೋದು ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನ ಹೆಚ್ಚು ಮಾಡುತ್ತೇವೆ. ರಾಜ್ಯ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಬಗ್ಗೆ ಮಾತನಾಡಿ, ಕೊರೊನಾ ಉಪತಳಿಯ ಬಗ್ಗೆ ಜನತೆ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಎರಡು ತಿಂಗಳ ಹಿಂದೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಈ ತಳಿ ಭಾರತೀಯರೊಬ್ಬರಲ್ಲಿ ಪತ್ತೆಯಾಗಿತ್ತು. ಆ ಬಳಿಕ, ಭಾರತದ ಬೇರೆ ಕಡೆಯಲ್ಲೂ ಪತ್ತೆಯಾಗಿದೆ. ಕೇರಳದಲ್ಲಿಯೂ ಸೋಂಕು ಪತ್ತೆಯಾಗಿದ್ದು ಗಾಬರಿ ಪಡುವ ಅಗತ್ಯವಿಲ್ಲ. ಕೇರಳದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮ ಇದೆ. ಜಿನೋಮಿಕ್ ಸೀಕ್ವೆನ್ಸಿಂಗ್ ಮೂಲಕ ಇದನ್ನು ಪತ್ತೆಹಚ್ಚಬಹುದು. ಚಿಂತಿತರಾಗಬೇಕಿಲ್ಲ ಎಂದಿದ್ದಾರೆ.