-->
1000938341
ಉಳ್ಳಾಲ: ಫೋನ್ ಖರೀದಿಸಿ ಹಣ ಕೊಡದೆ ವಂಚಿಸಿ ಅಸಾಮಿ ಪರಾರಿ

ಉಳ್ಳಾಲ: ಫೋನ್ ಖರೀದಿಸಿ ಹಣ ಕೊಡದೆ ವಂಚಿಸಿ ಅಸಾಮಿ ಪರಾರಿ


ಉಳ್ಳಾಲ: ಕಳೆದ ತಿಂಗಳು ಮೈತುಂಬಾ ಒನ್ ಗ್ರಾಂ ಒಡವೆಗಳನ್ನು ಧರಿಸಿ ತೊಕ್ಕೊಟ್ಟಿನ ಎರಡು ಅಂಗಡಿಗಳಿಗೆ ವಂಚಿಸಿರುವ ಬೆನ್ನಲ್ಲೇ ಕುತ್ತಾರು ಪಂಡಿತ್ ಹೌಸ್‌ನ ಮೊಬೈಲ್ ಫೋನ್ ಮಳಿಗೆಯಲ್ಲಿ ಫೋನ್ ಖರೀದಿಸಿದ್ದ ವ್ಯಕ್ತಿಯೊಬ್ಬನು ತನ್ನ ಫೋನ್ ಸ್ವಿಚ್‌ ಆಫ್‌ ಆಗಿದ್ದು, ಗೂಗಲ್ ಪೇ ಮಾಡಲು ಆಗುವುದಿಲ್ಲ. ನಾಳೆ ಹಣ ಕೊಡುವುದಾಗಿ ಹೇಳಿ ವಂಚಿಸಿದ ಘಟನೆ ನಡೆದಿದೆ. ಈ ಎರಡೂ ಪ್ರಕರಣಗಳ ರೂವಾರಿ ಒಬ್ಬನೇ ಎಂದು ತಿಳಿದು ಬಂದಿದೆ. ಇದೀಗ ಈ ಖತರ್ನಾಕ್ ವಂಚಕ ಗೂಡ್ಸ್ ಮುನೀರನ ವಿರುದ್ಧ ಅಂಗಡಿ ಮಾಲಕ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಅಕ್ಟೋಬ‌ರ್ ನಲ್ಲಿ ತೊಕ್ಕೊಟ್ಟು ಓವ‌ರ್ ಬ್ರಿಡ್ಜ್‌ ಬಳಿಯ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮಾ ಎಂಬವರ ದಿನಸಿ ಅಂಗಡಿಗೆ ಮೈತುಂಬಾ ಚಿನ್ನದ ಒಡವೆ ಧರಿಸಿ ಬಂದಿದ್ದ ಗೂಡ್ಸ್ ಮುನೀರ್ ಹೆಲ್ಮಟ್ ತೆಗೆಯದೆ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿದ್ದಾನೆ. ಬಳಿಕ ಸಾವಿರಾರು ರೂಪಾಯಿ ಮೌಲ್ಯದ ಸಿಹಿ ತಿಂಡಿ, ದಿನಸಿ ಖರೀದಿಸಿ ಗೂಗಲ್ ಪೇ ಮಾಡಲು ಫೋನ್ ಸ್ವಿಚ್‌ ಆಫ್‌ ಆಗಿದೆ. ಈಗಲೇ ಹಣ ತಂದು ಕೊಡುವೆ ಎಂದು ಹೇಳಿ ವ್ಯಾಪಾರಿಗಳನ್ನು ಯಾಮಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಅದೇ ಶೋಕಿವಾಲ ಕಳೆದ ನವೆಂಬರ್ 13 ರಂದು ಮತ್ತೆ ಕುತ್ತಾರು ಪಂಡಿತ್ ಹೌಸ್ ನಲ್ಲಿರುವ "ಸುಧಿ ಕಲೆಕ್ಷನ್" ಎಂಬ ಮೊಬೈಲ್ ಫೋನ್ ಅಂಗಡಿಗೆ ಬಂದಿದ್ದಾನೆ. ಅಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್‌ ಆಫ್ ಎಂದಿದ್ದಾನೆ. ನನ್ನ ಮನೆ ಸಮೀಪದಲ್ಲೇ ಇದ್ದು ನಾಳೆ ಹಣ ನೀಡೋದಾಗಿ ತನ್ನ ಸಂಪರ್ಕದ ಮೊಬೈಲ್‌ ಸಂಖ್ಯೆ ನೀಡಿದ್ದಾನೆ. ಮರುದಿನ ಅಂಗಡಿ ಮಾಲಕ ದೀಪಕ್ ಮೊಬೈಲ್‌ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿದೆ. ಇದರಿಂದ ತಾನು ಮೋಸ ಹೋಗಿರುವುದು ತಿಳಿದಿದೆ. ಅವರು ಪರಿಶೀಲನೆ ನಡೆಸಿದಾಗ ಖತರ್ನಾಕ್ ವಂಚಕ ಗೂಡ್ಸ್ ಮುನೀರನ ನಂಬರ್ ಎಂದು ತಿಳಿದಿದೆ. ಗೂಡ್ಸ್ ಮುನೀರನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ವಂಚನೆ, ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತ ಈಗ ಒನ್ ಗ್ರಾಂ ಒಡವೆಗಳನ್ನು ಧರಿಸಿ ಅಮಾಯಕರನ್ನು ಯಾಮಾರಿಸಿ ವಂಚಿಸುವ ಖಯಾಲಿ ಬೆಳೆಸಿದ್ದಾನೆ. 

Ads on article

Advertise in articles 1

advertising articles 2

Advertise under the article