ವಿಷದ ಹಾವು ಬಿಟ್ಟು ಪತ್ನಿ, ಪುತ್ರಿಯನ್ನು ಕೊಂದ!
Saturday, November 25, 2023
ಭುವನೇಶ್ವರ: ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳು ಮಲಗಿದ್ದ ಕೋಣೆಗೆ ವಿಷದ ಹಾವನ್ನು ಬಿಟ್ಟು ಪತ್ನಿ ಮಗಳನ್ನು ಕೊಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಬಿಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಆರೋಪಿ ಕೆ.ಗಣೇಶ್ ಪಾತ್ರಾಗೂ ಪತ್ನಿ ಕೆ. ಬಸಂತಿ ಪಾತ್ರಾಗೂ ವೈಮನಸ್ಸು ಇತ್ತು. ಇದೇ ಕಾರಣಕ್ಕಾಗಿ ಹಾವಾಡಿಗನಿಂದ ವಿಷದ ಹಾವನ್ನು ಪೂಜೆಗೆಂದು ತರಿಸಿದ ಆತ, ತನ್ನ ಪತ್ನಿ ಮತ್ತು ಮಗಳು ದೇಬಸ್ಮಿತ ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟಿದ್ದಾನೆ. ಹಾವು ಕಚ್ಚಿ ಬೆಳಗಾಗುವ ವೇಳೆಗೆ ತಾಯಿ ಮಗಳಿಬ್ಬರೂ ಮೃತಪಟ್ಟಿದ್ದಾರೆ.
ಮೊದಲಿಗೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಮೃತ ಮಹಿಳೆಯ ತಂದೆ ನೀಡಿದ ದೂರು ಆಧರಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.