ಮದುವೆಗೆ ಒಲ್ಲೆಯೆಂದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ
Thursday, November 30, 2023
ಹಾಸನ: ಮದುವೆಗೆ ಒಲ್ಲೆಯೆಂದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. ಆಕೆಯನ್ನು ಅಪಹರಣ ಮಾಡಿರುವ ದೃಶ್ಯಗಳು ಮನೆಯೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪರಹರಣಕ್ಕೊಳಗಾದ ಶಿಕ್ಷಕಿ ಅರ್ಪಿತಾ.
ಗುರುವಾರ ಬೆಳಗ್ಗೆ ಸುಮಾರು 8ಗಂಟೆ ವೇಳೆಗೆ ಅರ್ಪಿತಾ ಶಾಲೆಗೆ ಹೋಗುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದವರು ಅವರನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಅರ್ಪಿತಾ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅರ್ಪಿತಾ ಅವರ ಸಂಬಂಧಿಕನಾದ ರಾಮು ಎಂಬಾತನೇ ಅಪಹರಣ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮದುವೆಗೆ ಅರ್ಪಿತಾ ಮತ್ತು ಕುಟುಂಬಸ್ಥರು ಒಪ್ಪದ ಹಿನ್ನೆಲೆ ಅಪಹರಣ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ರಾಮು ಎಂಬಾತ ಪುತ್ರಿಯನ್ನು ಕಿಡ್ನಾಪ್ ಮಾಡಿದ್ದಾನೆ. ಅವನು ನಮ್ಮ ಚಿಕ್ಕಮನ ಮಗನಾಗಿದ್ದು, 15 ದಿನಗಳ ಹಿಂದೆ ತನ್ನ ಹೆತ್ತವರೊಂದಿಗೆ ಬಂದು ಅರ್ಪಿತಾಳನ್ನು ತನಗೆ ಮದುವೆ ಮಾಡಿಕೊಡಿ ಎಂದು ಹೇಳಿದ್ದರು. ಆದ್ರೆ ಅರ್ಪಿತಾ ಆತನನ್ನು ಒಪ್ಪದ ಹಿನ್ನೆಲೆ ನಾವು ಮದುವೆಗೆ ನಿರಾಕರಿಸಿದ್ದೇವೆ. ಮದುವೆಗೆ ಒಪ್ಪದ ಹಿನ್ನೆಲೆ ಅಂದಿನಿಂದ ಕಿರುಕುಳ ನೀಡಲು ಆರಂಭಿಸಿದ್ದರು. ಇದೀಗ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಅರ್ಪಿತಾ ತಾಯಿ ಹೇಳಿದ್ದಾರೆ.