ಕಾಸರಗೋಡು: ಜೀಪು ಹಾಗೂ ಸ್ಕೂಟರ್ ನಡುವೆ ಸಂಭವಿಸಿರುವ ಅಪಘಾತದಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾಸರಗೋಡಿನ ಪೈವಳಿಕೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಪೈವಳಿಕೆ ಲಾಲ್ ಬಾಗ್ ನಿವಾಸಿ ಇಫ್ರಾಝ್ ಮೃತಪಟ್ಟ ಬಾಲಕ. ಈತ ಉಪ್ಪಳ ತಹಾನಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಗೆಳೆಯನೊಂದಿಗೆ ಮಸೀದಿಯಿಂದ ಮರಳುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಮನೆ ಸಮೀಪವೇ ಈ ಅಪಘಾತ ನಡೆದಿದೆ.
ಮುಂಭಾಗದಲ್ಲಿ ತೆರಳುತ್ತಿದ್ದ ಜೀಪು ತಿರುವೊಂದರಲ್ಲಿ ಏಕಾಏಕಿ ಬ್ರೇಕ್ ಹಾಕಿದೆ. ಆಗ ಹಿಂಭಾಗದಲ್ಲಿ ಬರುತ್ತಿದ್ದ ಸ್ಕೂಟರ್ ಜೀಪಿಗೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಪರಿಣಾಮ ಸ್ಕೂಟರ್ ಹಿಂಬದಿ ಸವಾರ ಇಫ್ರಾಝ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ಕೊಂಡೊಯ್ದದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.