ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಎಕ್ಸ್‌ಪೈರಿ ಡೇಟ್ ಮುಗಿದು ಹೋಗಿದೆ. ರಾಜ್ಯ ವಿಧಾನಸಭಾ
ಚುನಾವಣೆಯಲ್ಲಿಯೇ ಸಾಬೀತಾಗಿದ್ದ ಈ ಕಟು ಸತ್ಯವು ತೆಲಂಗಾಣ ಸೇರಿದಂತೆ ಪಂಚರಾಜ್ಯ ಚುನಾವಣೆಗಳಲ್ಲಿ ಮರು ಸಾಬೀತಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತೆಲಂಗಾಣದಲ್ಲಿ ರಾಜ್ಯ ಸರಕಾರದ 'ಗ್ಯಾರಂಟಿ ಜಾಹೀರಾತುಗಳ ವಿರುದ್ದ ಬಿಜೆಪಿ ಟೀಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, "ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರ ಹತಾಶರಾಗಿದ್ದಾರೆ,'' ಎಂದಿದ್ದಾರೆ. "ಮೋದಿ ಹಾಗೂ ಅಮಿತ್ ಶಾ ಜೋಡಿ ತಮ್ಮ ನಾಯಕತ್ವಕ್ಕೆ ಅಡ್ಡಗಾಲು ಆಗಬಾರದೆಂಬ ದುರುದ್ದೇಶದಿಂದ ಬಿಜೆಪಿಯಲ್ಲಿರುವ ಪ್ರಾದೇಶಿಕ ನಾಯಕರನ್ನೆಲ್ಲ ತುಳಿದುಹಾಕಿದ್ದಾರೆ. ಹಾಗಾಗಿ ಯಾವ ರಾಜ್ಯದಲ್ಲಿಯೂ ಜನತೆ ನಂಬಿಕೆ ಇಡಬಲ್ಲಂತಹ ಸ್ಥಳೀಯ ನಾಯಕರೇ ಇಲ್ಲದಂತಾಗಿದೆ,'' ಎಂದು ಹೇಳಿದ್ದಾರೆ.
“ಮೋದಿ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯ ಶೇ.10ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ಇದು ತೆಲಂಗಾಣ ಮತದಾರರಿಗೆ ಅರಿವಾಗಿದೆ. ಪ್ರಧಾನಿ ಮೋದಿ ಚುನಾವಣಾ ಪ್ರಚಾರದಿಂದ ಬಿಜೆಪಿಗೆ ನಷ್ಟವೇ ಹೊರತು ಯಾವ ಲಾಭವೂ ಇಲ್ಲ" ಎಂದು ವ್ಯಂಗ್ಯವಾಡಿದ್ದಾರೆ.