ಮೂರು ಕೋಟಿ ಮೌಲ್ಯದ ಆನೆದಂತೆ, ಶ್ರೀಗಂಧ, ರಕ್ತಚಂದನ ಅಕ್ರಮ ದಾಸ್ತಾನು: ಇಬ್ಬರ ಬಂಧನ

ಚಿತ್ರದುರ್ಗ: ಇಲ್ಲಿನ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆನೆದಂತೆ, ಶ್ರೀಗಂಧ, ರಕ್ತಚಂದನವನ್ನು  ವಶಪಡಿಸಿಕೊಂಡಿದ್ದಾರೆ.

ಮನೆಯಲ್ಲಿ ಆನೆದಂತೆ, ಶ್ರೀಗಂಧ, ರಕ್ತಚಂದನವನ್ನು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಮೂರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಚಿಕ್ಕಮಗಳೂರು ಮೂಲದ ಚಂದ್ರಶೇಖರ್​ ಹಾಗೂ ತಮಿಳುನಾಡು ಮೂಲದ ಖಲೀಲ್​ ಎಂಬುವವರನ್ನು ಬಂಧಿಸಿದ್ದಾರೆ‌. ಸೌದೆ ವ್ಯಾಪಾರ ಮಾಡುವುದಾಗಿ ಹೇಳಿ‌ ನಾರಾಯಣಪ್ಪ ಎಂಬುವವರ ಮನೆಯನ್ನು ಲೀಸ್​ಗೆ ಪಡೆದಿದ್ದರು ಎಂದು ತಿಳಿದು ಬಂದಿದೆ.

ಪೊಲೀಸರು ಎಲ್ಲಾ ವಸ್ತುಗಳನ್ನು ಮಹಜರು ಮಾಡಿದ್ದು, ಚಿತ್ರದುರ್ಗ ಪೊಲೀಸ್ ಕಚೇರಿಗೆ ಅಧಿಕಾರಿಗಳ ತಂಡ ಆ ವಸ್ತುಗಳನ್ನು ತೆಗೆದುಕೊಂಡು ಹೋಗಿದೆ. ಇನ್ನು ಅಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ತಿಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.