ಆಸ್ತಿ ವರ್ಗಾವಣೆ ಮಾಡಿಲ್ಲವೆಂದು ತಂದೆಯ ಕಣ್ಣನ್ನೇ ಕಿತ್ತು ಹಾಕಿರುವ ಪುತ್ರನಿಗೆ 9ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
Friday, November 24, 2023
ಬೆಂಗಳೂರು: ಆಸ್ತಿ ವರ್ಗಾವಣೆ ಮಾಡಿಲ್ಲವೆಂದು ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿರುವ ಪುತ್ರನಿಗೆ 9 ವರ್ಷ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರೂ. ದಂಡ ವಿಧಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಅಭಿಶೇಕ್ ಚೇತನ್(44) ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2018ರ ಆ.29ರಂದು ಬನಶಂಕರಿಯ ಶಾಕಾಂಬರಿನಗರದಲ್ಲಿ ತನ್ನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಲ್ಲ ಎಂಬ ಕಾರಣಕ್ಕೆ ಅಭಿಷೇಕ್ ತನ್ನ ತಂದೆ ಪರಮೇಶ್(66) ಮೇಲೆ ಹಲ್ಲೆ ನಡೆಸಿ ಕಣ್ಣು ಕಿತ್ತುಹಾಕಿದ್ದ. ಈತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನ, ಆಸ್ತಿ ವಿಚಾರವಾಗಿ ನಂಬಿಕೆ ದ್ರೋಹ ಮತ್ತು ಶಾಂತಿಭಂಗ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರೂ. ದಂಡ ವಿಧಿಸಿದೆ.
ಜೆ.ಪಿ.ನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿ ಅಭಿಶೇಕ್ ನನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಪರಾಧಿ ಅಭಿಷೇಕ್‌ನನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ. ಪೊಲೀಸರ ಪರ ಸರಕಾರಿ ಅಭಿಯೋಜಕಿ ಕೆ.ಎಸ್.ವೀಣಾ ವಾದ ಮಂಡಿಸಿದ್ದರು.