ಅಕ್ರಮ ಹಣ ವರ್ಗಾವಣೆ ಪ್ರಕರಣ : ಮಹಾದೇವ ಸೇರಿದಂತೆ 22ಬೆಟ್ಟಿಂಗ್ ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ


ನವದೆಹಲಿ: ಮಹಾದೇವ ಬೆಟ್ಟಿಂಗ್​ ಆ್ಯಪ್​ ಹಗರಣದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ಮೂಲಕ ಮಹಾದೇವ್ ಬುಕ್ ಆನ್‌ಲೈಲ್​ ಸೇರಿದಂತೆ ಇತರೆ 22 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿರುವ ಕೇಂದ್ರ ಸರ್ಕಾರ ಇಡಿ ಶಿಫಾರಸ್ಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಕಾನೂನುಬಾಹಿರ ಅಪ್ಲಿಕೇಷನ್​ಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ಪ್ರತಿಕ್ರಿಯಿಸಿ, ಸೆಕ್ಷನ್ 69A ಐಟಿ ಕಾಯ್ದೆಯಡಿಯಲ್ಲಿ ವೆಬ್‌ಸೈಟ್, ಆ್ಯಪ್ ಅನ್ನು ನಿಷೇಧಿಸುವ ಎಲ್ಲಾ ಅಧಿಕಾರವನ್ನು ಛತ್ತೀಸ್‌ಗಢ ಸರ್ಕಾರ ಹೊಂದಿದೆ. ಆದರೆ, ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕಳೆದ ಒಂದೂವರೆ ವರ್ಷದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ವಾಸ್ತವವಾಗಿ, ಇಡಿಯಿಂದ ಮೊದಲ ಮತ್ತು ಏಕೈಕ ಮನವಿ ಸ್ವೀಕರಿಸಲಾಗಿದೆ. ಅದರನ್ವಯ ಕಾರ್ಯನಿರ್ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮಹಾದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 19 ರ ಅಡಿಯಲ್ಲಿ ಸಂಸ್ಥೆಯ ಮಾಲಕರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಕಳೆದ ವಾರ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ನೀಡಿರುವ ಕುರಿತು ಫೋರೆನ್ಸಿಕ್ ವಿಶ್ಲೇಷಣೆ ಮತ್ತು ‘ಕ್ಯಾಶ್ ಕೊರಿಯರ್’ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಜಾರಿ ನಿರ್ದೇಶನಾಲಯ ಕ್ರಮಕ್ಕೆ ಆಗ್ರಹಿಸಿದೆ.