ನವದೆಹಲಿ: ಬಲ್ಗೇರಿಯಾ ದೇಶದ ಪ್ರಸಿದ್ಧ ನಾಸ್ಟ್ರಾಡಾಮಸ್ ಬಾಬಾ ವಂಗಾರ ಭವಿಷ್ಯವಾಣಿಗಳು ಸದಾ ಫಲಿಸಿಸುತ್ತಿದ್ದು, ಅವುಗಳು ಜಗತ್ಪ್ರಸಿದ್ಧವಾಗಿವೆ. ಬರಾಕ್ ಒಬಾಮಾರ ಅಧ್ಯಕ್ಷ ಸ್ಥಾನದಿಂದ ಪ್ರಿನ್ಸೆಸ್ ಡಯಾನಾರ ಸಾವಿನವರೆಗೆ ಅವರು ನುಡಿದಿರುವ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ. ಇದೀಗ ಅವರು 2024ರ ಸಾಲಿನ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷವು ಹಲವು ವಿಪತ್ತುಗಳಿಂದ ಕೂಡಿರಲಿದೆ ಎಂದು ಬಾಬಾ ವಂಗಾ ಹೇಳಿರುವುದು ಆತಂಕವನ್ನು ಮೂಡಿಸಿದೆ.
2024ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರ ಹತ್ಯೆಗೆ ಪ್ರಯತ್ನ ನಡೆಯಲಿದೆ ಎಂದು ವಂಗಾ ಮುನ್ಸೂಚನೆ ನೀಡಿದ್ದಾರೆ. ಯುರೋಪ್ನಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸಲಿದೆ ಎಂದೂ ಹೇಳಿದ್ದಾರೆ.
ಈ ವರ್ಷದಲ್ಲಿ ಸಾಕಷ್ಟು ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ. ಸಾಲಗಳ ಹೊರೆ ಹೆಚ್ಚಾಗಲಿದೆ. ಗಡಿ ಮತ್ತು ರಾಜಕೀಯ ವಿವಾದಗಳು ಉಲ್ಬಣಗೊಳ್ಳುತ್ತದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಭೂಕಂಪಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ತಾಪಮಾನದಲ್ಲಿ ಬದಲಾವಣೆ ಇರಲಿದ್ದು, ತಣ್ಣನೆಯ ಸ್ಥಳಗಳು ಬಿಸಿಯಾಗುತ್ತವೆ. ಕರಗುವ ಹಿಮನದಿಗಳಿಂದ ಕರಾವಳಿ ನಗರಗಳು ನೀರಿನಲ್ಲಿ ಮುಳುಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಆದರೆ 2024ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಿಹಿ ಸುದ್ದಿಗಳು ಬರಲಿದೆ. ಅದು ಮನುಷ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಅಲ್ಝಿಮರ್ಸ್, ಕ್ಯಾನ್ಸರ್ ಕಾಯಿಲೆಗೆ ವಿಜ್ಞಾನಿಗಳು ಮದ್ದು ಕಂಡುಕೊಳ್ಳಲಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಧನೆ ಕಂಡುಬರಲಿದೆ ಎಂದಿದ್ದಾರೆ.