ಕಲಬುರಗಿ: ಅಪ್ಝಲಪುರ ತಾಲೂಕಿನ ಚಿಣಮಗೇರ ಗ್ರಾಮದ ಸರಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆಂದು ಮಾಡಿದ್ದ ಸಾಂಬಾರಿನ ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎರಡನೇ ತರಗತಿಯ ವಿದ್ಯಾರ್ಥಿನಿ ಮಹಾಂತಮ್ಮ(8) ರವಿವಾರ ಮುಂಜಾನೆ ಮೃತಪಟ್ಟಿದ್ದಾಳೆ.
ಚಿಣಮಗೇರ ಗ್ರಾಮದ ಸರಕಾರಿ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಮಹಾಂತಮ್ಮ ನವೆಂಬರ್ 16ರಂದು ಬಿಸಿಯೂಟ ತಯಾರಿಸುವ ಸಾಂಬಾರು ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಗಾಯಾಳು ಮಹಾಂತಮ್ಮಳನ್ನು ಕಲಬುರಗಿಯ ಜಿಮ್ಸ್ ಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಹಾಂತಮ್ಮ ಇಂದು ಮುಂಜಾನೆ 3:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ.
ಈ ಪ್ರಕರಣದಲ್ಲಿ ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಹಾಗೂ ಅಡುಗೆ ಮುಖಸ್ಥರನ್ನು ಡಿಡಿಪಿಐ ಮತ್ತು ತಾಲೂಕು ಪಂಚಾಯತ್ ಇಒ ಅಮಾನತು ಮಾಡಿದ್ದಾರೆ.