-->
1000938341
ಶೋಕಿ ಜೀವನಕ್ಕೆ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಪದವಿ ವಿದ್ಯಾರ್ಥಿಗಳು ಜೈಲು ಸೇರಿದ್ರು

ಶೋಕಿ ಜೀವನಕ್ಕೆ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಪದವಿ ವಿದ್ಯಾರ್ಥಿಗಳು ಜೈಲು ಸೇರಿದ್ರು

ಬೆಂಗಳೂರು: ಶೋಕಿ ಜೀವನಕ್ಕೆ ಮೊಬೈಲ್ ಅಂಗಡಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪದವಿ ವಿದ್ಯಾರ್ಥಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. 

ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಪ್ರಭು (20), ಮೌನೇಶ (19) ಹಾಗೂ ಅಜಯ್ (19) ಬಂಧಿತ‌ ಆರೋಪಿಗಳು. ಇವರು ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಾಗಿದ್ದಾರೆ.

ಸಂಜಯನಗರದ ನ್ಯೂ ಬಿಇಎಲ್ ರಸ್ತೆಯ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ 50 ಲಕ್ಷ ರೂ. ಮೌಲ್ಯದ ದುಬಾರಿ ಮೊಬೈಲ್, ಕೈಗಡಿಯಾರ, ಲ್ಯಾಪ್‌ಟಾಪ್, ಕ್ಯಾಮರಾ, ಸ್ಮಾರ್ಟ್ ವಾರ್ಚ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಪ್ರಭು, ಮೌನೇಶ್ ಮತ್ತು ಅಜಯ್ ಮೂವರೂ ಸ್ನೇಹಿತರು. ಪ್ರಭು ಶೋಕಿ ಜೀವನಕ್ಕೆಂದು ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಕಳ್ಳತನದ ಪ್ಲ್ಯಾನ್ ಮಾಡಿ ತನ್ನ ಸ್ನೇಹಿತರೊಂದಿಗೆ ಚರ್ಚಿಸಿದ್ದಾನೆ. ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿ ಮಾಲಕ ಸೆಕೆಂಡ್ ಹ್ಯಾಂಡ್ ಇಲೆಕ್ಟ್ರಾನಿಕ್ ವಸ್ತುಗಳನ್ನು ಬಿಲ್ ಸಮೇತ ಖರೀದಿಸಿ ರಿಪೇರಿ ಮಾಡಿ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಈ ಅಂಗಡಿಗೆ ಪ್ರಭು, ಹೋಗಿ ಐಫೋನ್ ಖರೀದಿಸಿ ವಿಡಿಯೋ ಮಾಡಿಕೊಂಡು ಬಂದಿದ್ದ. ಅಂಗಡಿ ಬಗ್ಗೆ ತಿಳಿದಿದ್ದ ಪ್ರಭು, ಸ್ನೇಹಿತರೊಂದಿಗೆ ಸೇರಿ ಕಳವುಗೈಯ್ಯಲು ಸ್ಕೆಚ್ ಹಾಕಿದ್ದಾನೆ.

ಮಸ್ರೂಮ್ ವ್ಯಾಪಾರ ಮಾಡುತ್ತಿದ್ದ ಅಜಯ್ ತಂದೆ ಬಳಿ ಇಕೋ ಗೂಡ್ಸ್ ವಾಹನ ಇತ್ತು. ಸೆ.28ರ ರಾತ್ರಿ ಅಜಯ್ ತನ್ನ ತಂದೆಯ ಗೂಡ್ಸ್ ವಾಹನ ತೆಗೆದುಕೊಂಡು ಸ್ನೇಹಿತರೊಂದಿಗೆ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಅಲ್ಲಿ ಶೆಟರ್ ಅನ್ನು ಒಡೆದು ಒಳನುಗ್ಗಿ ಐಫೋನ್, ಓನ್ ಪ್ಲಸ್, ಸ್ಯಾಮ್‌ಸಾಂಗ್, ಓಪೋ, ಲ್ಯಾಪ್‌ಟಾಪ್, ಹ್ಯಾಂಡಿ ಕ್ಯಾಮರಾ, ಸ್ಮಾರ್ಟ್ ವಾಚ್, ಇಲೆಕ್ಟ್ರಾನಿಕ್ ವಸ್ತುಗಳನ್ನು ಬಾಕ್ಸ್‌ಗೆ ತುಂಬಿಕೊಂಡು ಗೂಡ್ಸ್ ವಾಹನದಲ್ಲಿ ತಂದು ಅಜಯ್ ಅವರ ತಂದೆ ಗೋದಾಮಿನಲ್ಲಿ ಬಚ್ಚಿಟ್ಟಿದ್ದಾರೆ. ಈ ಬಗ್ಗೆ ಅಂಗಡಿ ಮಾಲಕ ನೀಡಿರುವ ದೂರಿನನ್ವಯ ಇನ್‌ಸ್ಪೆಕ್ಟರ್ ಭಾಗ್ಯವತಿ ಜೆ. ಟ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, 36 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳವು ಮಾಡಿದ್ದ ಎಲ್ಲ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ದಯಾನಂದ್ ಮಾಹಿತಿ ನೀಡಿದ್ದಾರೆ.

ಕಳವು ಮಾಡಿದ ವಸ್ತುಗಳನ್ನು ಇಕೋ ವಾಹನದಲ್ಲಿ ತುಂಬಿಕೊಂಡು ಎಚ್‌ಎಸ್‌ಆರ್ ಲೇಔಟ್‌ಗೆ ಬರುವಾಗ ಮಾರ್ಗಮಧ್ಯೆ ಭಯದಲ್ಲಿ ಎರಡು ಸಿಗ್ನಲ್ ಜಂಪ್ ಮಾಡಿದ್ದರು. ಆದ್ದರಿಂದ ಇಕೋ ಗೂಡ್ಸ್ ವಾಹನದ ಮೇಲೆ ಸ್ವಯಂ ಚಾಲಿತ ದಂಡ ವಿಧಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಅಂಗಡಿ ಸಮೀಪದ ಸಿಸಿ ಕ್ಯಾಮರಾದಲ್ಲಿ ವಾಹನದ ನಂಬರ್ ಪ್ಲೇಟ್ ದೃಶ್ಯ ಸೆರೆಯಾಗಿತ್ತು. ಸಿಸಿ ಕ್ಯಾಮರಾಗಳ ಸಹಾಯದಿಂದ ಗೂಡ್ಸ್ ವಾಹನ ಜಾಡು ಹಿಡಿಯುತ್ತಾ ಸಾಗಿದಾಗ ಸಿಗ್ನಲ್ ಜಂಪ್ ಮಾಡಿರುವುದು ತಿಳಿದು ಬಂದಿದೆ. 

ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಗೂಡ್ಸ್ ವಾಹನ ನಂಬರ್ ಪರಿಶೀಲನೆ ಮಾಡಿದಾಗ ಸ್ವಯಂ ಚಾಲಿತವಾಗಿ ದಂಡ ಜನರೇಟ್ ಆಗಿತ್ತು. ಅದರಲ್ಲಿನ ವಿಳಾಸ ಹುಡುಕಿ ಹೋದಾಗ, ಮನೆ ಸಮೀಪದ ಮೈದಾನದಲ್ಲಿ ಗೂಡ್ಸ್ ವಾಹನ ಲಭ್ಯವಾಗಿತ್ತು. ಸ್ವಲ್ಪ ಹೊತ್ತಿಗೆ ಬಂದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಜಯ್ ಮಾಹಿತಿ ಸಿಕ್ಕಿದೆ. ಆತನನ್ನು ವಶಕ್ಕೆ ಪಡೆದಾಗ, ಇತರರು ಸೆರೆ ಸಿಕ್ಕಿದ್ದಾರೆ. ಗೋದಾಮಿನಲ್ಲಿ ಬಚ್ಚಿಟ್ಟಿದ್ದ ಕದ್ದ ವಸ್ತುಗಳ ಬಗ್ಗೆ ಸಹ ಬಾಯ್ಬಿಟ್ಟರು ಎಂದು ಬಿ.ದಯಾನಂದ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article